ಗುಡಿಬಂಡೆ: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಗುಡಿಬಂಡೆಯಲ್ಲಿ ಶಾಂತಿಯುತವಾಗಿ ನೆರವೇರಿದೆ. ತಾಲೂಕಿನಲ್ಲಿ ಒಟ್ಟು 110 ಮತಗಳಿದ್ದು, 108 ಮತಗಳು ಚಲಾವಣೆಯಾಗಿದೆ. ತಮ್ಮ ಅಭ್ಯರ್ಥಿಗೆ ಮತ ಚಲಾಯಿಸುವಂತೆ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಬೆಂಬಲಿತರು ಮತದಾರರಲ್ಲಿ ಮತಯಾಚನೆ ಮಾಡುವುದು ಸಾಮಾನ್ಯವಾಗಿತ್ತು.
ಬೆಳಿಗ್ಗೆ 8 ಗಂಟೆಯಿಂದಲೇ ಚುನಾವಣೆಯ ಮತದಾನ ಆರಂಭವಾಗಿತ್ತು. ಆರಂಭದಿಂದ ನೀರಸವಾಗಿ ಮತದಾನ ನಡೆಯಿತು. ಮತದಾರರನ್ನು ತಮ್ಮ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮುಖಂಡರು ಮನವಿ ಮಾಡಿಕೊಳ್ಳುತ್ತಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗುಡಿಬಂಡೆ ಪೊಲೀಸರು ಸೂಕ್ತ ಬಂದೋಬಸ್ತ್ ನೀಡಿದ್ದರು.
ತಾಲೂಕು ಕಚೇರಿಯಲ್ಲಿ ಚುನಾವಣಾ ಬೂತ್ ಜನರ ಆಕ್ರೋಷ: ಇನ್ನೂ ತಾಲೂಕು ಕಚೇರಿಯಲ್ಲಿ ಚುನಾವಣೆಯ ಸಂಬಂಧ ಬೂತ್ ಇಡಲಾಗಿತ್ತು. ಇದರಿಂದ ಸಾರ್ವಜನಿಕರ ಕೆಲಸಗಳಿಗೆ ಸಮಸ್ಯೆಯಾಗಿದೆ. ಈಗಾಗಲೇ ಶಾಲಾ ಕಾಲೇಜುಗಳು ಆರಂಭವಾಗುತ್ತಿವೆ. ಶಾಲೆಗಳಿಗೆ ದಾಖಲಾಗಲು ಮಕ್ಕಳಿಗೆ ಜಾತಿ, ಆದಾಯ ಪ್ರಮಾಣಪತ್ರಗಳು ಬೇಕಾಗಿರುತ್ತದೆ. ಚುನಾವಣೆಯ ನಿಮಿತ್ತ ತಾಲೂಕು ಕಚೇರಿಯ ಗೇಟ್ ಬಂದ್ ಮಾಡಿ ಸಾರ್ವಜನಿಕರಿಗೆ ನಿಷೇಧ ಮಾಡಲಾಗಿತ್ತು. ಇದರಿಂದ ತಾಲೂಕು ಕಚೇರಿಗೆ ಕೆಲಸ ಕಾರ್ಯಗಳಿಗೆ ಬಂದಂತಹ ಜನಸಾಮಾನ್ಯರಿಗೆ ತುಂಬಾನೆ ಸಮಸ್ಯೆಯಾಗಿದೆ. ಜನರಿಗೆ ಅಡ್ಡಿಪಡಿಸುವ ಈ ಅಧಿಕಾರಿಗಳ ಕಾರ್ಯಕ್ಕೆ ನಮ್ಮ ವಿರೋಧವಿದೆ. ಇಂತಹ ಚುನಾವಣೆಗಳನ್ನು ಶಾಲೆಗಳಲ್ಲಿ ನಡೆಸಬೇಕು. ತಾಲೂಕು ಕಚೇರಿಯಲ್ಲಿ ನಡೆಸಿದ ಹಿನ್ನೆಲೆ ನಮಗೆ ಸಮಸ್ಯೆಯಾಗುತ್ತಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಮುಖಂಡ ಜಿ.ವಿ.ಗಂಗಪ್ಪ ಆರೋಪಿಸಿದರು.