ರಾಜ್ಯದಲ್ಲಿ ಭಾರಿ ಸದ್ದು ಮಾಡಿದಂತಹ ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಿಗಮದ (Valmiki Tribes Development Corporation) 187 ಕೋಟಿ ರೂ. ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಗ್ರಾಮೀಣ ಕಾಂಗ್ರೇಸ್ ಶಾಸಕ ನಾಗೇಂದ್ರ ರವರನ್ನು ED ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಿಗಮದ (Valmiki Scheduled Tribes Development Corporation) 187 ಕೋಟಿ ಬಹುಕೋಟಿ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿತ್ತು. ಕಳೆದ ಬುಧವಾರ ಏಕಾಏಕಿ ED ಅಧಿಕಾರಿಗಳು ಕಾಂಗ್ರೇಸ್ ಪಕ್ಷದ ಬಳ್ಳಾರಿ ಗ್ರಾಮೀಣ ಶಾಸಕರಾದ ನಾಗೇಂದ್ರ ಹಾಗೂ ರಾಯಚೂರು ಗ್ರಾಮೀಣ ಶಾಸಕರಾದ ಬಸವನಗೌಡ ದದ್ದಲ್ ರವರುಗಳ ನಿವಾಸಗಳ ಮೇಲೆ ಧಾಳಿ ನಡೆಸಿದ್ದರು. ಬಳಿಕ ಬೆಂಗಳೂರಿನಲ್ಲಿರುವ ನಾಗೇಂದ್ರ ಆಪ್ತ ಸಹಾಯಕ ಹರೀಶ್ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆಯ ವೇಳೆ ಹರೀಶ್ ನೀಡಿದ ಮಾಹಿತಿಯನ್ನು ಆಧರಿಸಿ ಶಾಸಕ ನಾಗೇಂದ್ರ ರವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಪ್ರಕರಣದ ಸಂಬಂಧ ಹೈದರಾಬಾದ್ ನ ಸತ್ಯನಾರಾಯಣ ವರ್ಮಾ ಎಂಬುವವರಿಂದ ಬಂದಂತಹ ಹಣ ನಾಗೇಂದ್ರ ರವರ ಪಿ.ಎ ಹರೀಶ್ ಗೆ ತಲುಪಿತ್ತು ಎಂದು ಹೇಳಲಾಗಿದೆ. ಜೊತೆಗೆ ಏಪ್ರಿಲ್ ಎರಡನೇಯ ವಾರ ಪದ್ಮನಾಭ ರಿಂದ ಹರೀಶ್ 25 ಲಕ್ಷ ಹಣ ಪಡೆದಿದ್ದ. ಈ ಕುರಿತು ಪದ್ಮನಾಭ್ ರವರೇ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ನಾಗೇಂದ್ರ ಪರ ಹವಾಲಾ ಹಣ ಹಾಗೂ ಚಿನ್ನದ ಬಿಸ್ಕೆಟ್ ಪಡೆದ ಆರೋಪ ಸಹ ಇದೆ. ಶಾಸಕ ನಾಗೇಂದ್ರ ಪರ ಸುಮಾರು 50-60 ಕೋಟಿ ವ್ಯವಹಾರ ನಡೆದಿದೆ ಎಂಬ ಅನುಮಾನ ಸಹ ಮೂಡಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಹರೀಶ್ ನನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಶಾಸಕ ನಾಗೇಂದ್ರ ರವರನ್ನು ಸಹ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಈ ಪ್ರಕರಣದಲ್ಲಿ ನಾಗೇಂದ್ರ ಬಂಧನವಾದರೇ ಕಾಂಗ್ರೇಸ್ ಸರ್ಕಾರದ ಮೊದಲ ವಿಕೆಟ್ ಪತನವಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ.