Valmiki Jayanthi – ಮಹರ್ಷಿ ವಾಲ್ಮೀಕಿ ಮಹರ್ಷಿಗಳು ರಚಿಸಿರುವ ರಾಮಾಯಣದಲ್ಲಿ ಉಲ್ಲೇಖಿಸಿರುವ ಅಂಶಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿವೆ. ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪವಾಗಿದ್ದು, ಮಹರ್ಷಿ ವಾಲ್ಮೀಕಿ (Valmiki Jayanthi) ಆದಿಕವಿ ಹೇಳಿಕೊಟ್ಟ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಜೊತೆಗೆ ನಮ್ಮ ಮಕ್ಕಳಿಗೆ ಅವರ ತತ್ವಾದರ್ಶಗಳ ಕುರಿತು ತಿಳಿಸಬೇಕು ಎಂದು ಸೋಮೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಪಿ.ಎನ್.ರಾಜಶೇಖರ್ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ನಿಚ್ಚನಬಂಡಹಳ್ಳಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ನಾಯಕರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಅವರು, ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾಕಾವ್ಯ ಇಡೀ ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಸಾಹಿತ್ಯ ಕೊಡುಗೆಯಾಗಿದೆ. ಜನಸಮುದಾಯದ ಎಲ್ಲ ಸಮಸ್ಯೆಗಳು, ಸಂಕಟಗಳು, ಸವಾಲುಗಳಿಗೆ ವಾಲ್ಮೀಕಿ ರಾಮಾಯಣದಲ್ಲಿ ಉತ್ತರ ಸಿಗುತ್ತದೆ. ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸೇರಿದಂತೆ ಉತ್ತಮ ಸಮಾಜ ನಿರ್ಮಾಣದ ಮಹತ್ವದ ಸಂಗತಿಗಳನ್ನು ರಾಮಾಯಣ ಮಹಾಕಾವ್ಯದಿಂದ ನಾವೆಲ್ಲರೂ ಕಲಿಯಬಹುದಾಗಿದೆ. ಜೊತೆಗೆ ಇತ್ತೀಚಿಗೆ ಸಮುದಾಯದವರು ಕುಡಿತಕ್ಕೆ ದಾಸರಾಗುತ್ತಿದ್ದಾರೆ. ಇದರಿಂದ ಅವರ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ. ಆದ್ದರಿಂದ ಕುಡಿತದಿಂದ ಎಲ್ಲರೂ ದೂರವಾಗಬೇಕು ಹಾಗೂ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದರು.
ಇದೇ ಸಮಯದಲ್ಲಿ ಕಸಾಪ ಅಧ್ಯಕ್ಷ ಬಿ.ಮಂಜುನಾಥ್ ಮಾತನಾಡಿ, ಇಂದಿನ ಸಮಾಜದಲ್ಲಿ ಓರ್ವ ಬೆಳೆಯುತ್ತಿದ್ದಾನೆ ಎಂದರೇ ಆತನನ್ನು ತುಳಿಯುವಂತಹ ಕೆಲಸ ಹೆಚ್ಚಾಗುತ್ತಿದೆ. ಅದರಲ್ಲೂ ನಮ್ಮ ವಾಲ್ಮೀಕಿ ಸಮುದಾಯದಲ್ಲಿ ಅದು ಹೆಚ್ಚಾಗಿದೆ ಎಂದೇ ಹೇಳಬಹುದು. ನಮ್ಮ ಸಮುದಾಯದ ಹುಡುಗ ಬೆಳೆಯುತ್ತಿದ್ದಾನೆ ಎಂದರೇ ಎಲ್ಲರೂ ಆತನನ್ನು ಮತಷ್ಟು ಬೆಳೆಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಬೆಳೆಯುತ್ತಿರುವವರ ಕಾಳೆಯುವಂತಹ ಕೆಲಸ ಮಾಡಬಾರದು ಎಂದು ತಿಳಿಸಿದರು.
ಬಳಿಕ ಶಿಕ್ಷಕ ರಾಮಾಂಜನೇಯ ಮಾತನಾಡಿ, ನಿಚ್ಚನಬಂಡಹಳ್ಳಿ ಗ್ರಾಮ ಚಿಕ್ಕ ಗ್ರಾಮವಾಗಿದ್ದು, ಈ ಗ್ರಾಮದಲ್ಲಿ ಎಲ್ಲರೂ ವಾಲ್ಮೀಕಿ ಸಮುದಾಯದ ಜನರೇ ಆಗಿದ್ದಾರೆ. ಇಂದಿನ ಕಾರ್ಯಕ್ರಮವನ್ನು ಈ ಗ್ರಾಮದ ಯುವಕರು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತಷ್ಟು ಉತ್ತಮವಾದ ಕಾರ್ಯಕ್ರಮಗಳನ್ನು ಆಯೋಜಿಸಲಿ ಎಂದು ಶುಭ ಹಾರೈಸಿದರು.
ಈ ವೇಳೆ ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಎನ್.ವಿ.ಗಂಗಾಧರ್, ಕಾರ್ಯದರ್ಶಿ ಹರಿಕೃಷ್ಣ, ಮಾಜಿ ತಾ.ಪಂ. ಸದಸ್ಯ ಚೆಂಡೂರು ರಾಮಾಂಜಿ, ಮುಖಂಡರಾದ ಶ್ರೀನಿವಾಸ್, ಜೆಸಿಬಿ ಮಂಜು, ಅಶ್ವತ್ಥಪ್ಪ, ರಮೇಶ, ಮಧು, ಶಿಕ್ಷಕರಾದ ಮನೋಹರ್, ಕೃಷ್ಣಮೂರ್ತಿ ಸೇರಿದಂತೆ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.