ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣದ (Valmiki Corporation Scam) ವಿಚಾರ ಸದನದಲ್ಲೂ ಭಾರಿ ಸದ್ದು ಮಾಡುತ್ತಿದೆ. ವಿರೋಧ ಪಕ್ಷದವರು ಈ ಪ್ರಕರಣವನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ನಡುವೆ ED (ಜಾರಿ ನಿರ್ದೇಶನಾಲಯ) ಅಧಿಕೃತವಾಗಿ ಪತ್ರಿಕ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ನಿಗಮದ ಹಣವನ್ನು ಚುನಾವಣೆಯಲ್ಲಿ ಮದ್ಯ ಖರೀದಿ ಮಾಡಲು ಬಳಸಿದ್ದಾರೆ ಎಂದು ಉಲ್ಲೇಖ ಮಾಡಿದೆ.
ಕರ್ನಾಟಕ ರಾಜ್ಯ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣದ (Valmiki Corporation Scam) ಸಂಬಂಧ ಇಡಿ ಅಧಿಕಾರಿಗಳು ನಾಲ್ಕು ರಾಜ್ಯಗಳಲ್ಲಿ 23 ಕಡೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಇಡಿ ಬಹಳಷ್ಟು ಸಾಕ್ಷ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಮಾಹಿತಿಯನ್ನು ಇಡಿ ಬುಧವಾರ ಬಹಿರಂಗಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 90 ಕೋಟಿ ಹಣವನ್ನು ಅಕ್ರಮ ಮಾಡುವ ನಿಟ್ಟಿನಲ್ಲಿ 18 ನಕಲಿ ಬ್ಯಾಂಕ್ ಅಕೌಂಟ್ ಗಳನ್ನು ಬಳಸಿದ್ದಾರೆ. ಈ ಹಣವನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಮದ್ಯ ಖರೀದಿ ಮಾಡಲು ಬಳಕೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಇಡಿ ತಮ್ಮ ಪ್ರಕಟನೆಯಲ್ಲಿ ತಿಳಿಸಿದೆ.
ಇನ್ನೂ ವಾಲ್ಮೀಕಿ ನಿಗಮದ ಹಗರಣ ಮೇ.26 ರಂದು ನಿಗಮದ ಉದ್ಯೋಗಿ ಚಂದ್ರಶೇಖರನ್ ಆತ್ಮಹತ್ಯೆಯ ಬಳಿಕ ಬಯಲಿಗೆ ಬಂತು. ಈ ಸಂಬಂಧ ರಾಜ್ಯ ಪೊಲೀಸರು ಹಾಗೂ ಸಿಬಿಐ ದಾಖಲಿಸಿದ್ದ ಎಫ್.ಐ.ಆರ್ ಗಳ ಆಧಾರದ ಮೇಲೆ ಇ.ಡಿ. ತನಿಖೆ ಆರಂಭಿಸಿತ್ತು. ಈ ಪ್ರಕರಣದ ಬೆನ್ನತ್ತಿ ಹೊರಟಾಗ ಇಡಿ ಗೆ ಅನೇಕ ಸಾಕ್ಷ್ಯಗಳು ಸಿಕ್ಕಿತ್ತು. ಈ ವೇಳೆ ಪ್ರಕರಣದ ಹಣವನ್ನು ಚುನಾವಣೆಯಲ್ಲಿ ಮದ್ಯ ಖರೀದಿಗೆ ಬಳಸಲಾಗಿದೆ. ಇದರೊಂದಿಗೆ ಅಕ್ರಮದಲ್ಲಿ ಬಂದ ಹಣವನ್ನು ಬಳಸಿಕೊಂಡು ಲ್ಯಾಂಬೋರ್ಗಿನಿ ಸೇರಿದಂತೆ ಐಷಾರಾಮಿ ವಾಹನಗಳನ್ನು ಖರೀದಿಸಲಾಗಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಪ್ರಕಟನೆಯಲ್ಲಿ ತಿಳಿಸಿದೆ.
ಇನ್ನೂ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಚಿವ ನಾಗೇಂದ್ರ ರವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ, ನಗದು ನಿರ್ವಹಣೆಯಲ್ಲಿ ತೊಡಗಿದ್ದ ಸಹವರ್ತಿಗಳ ಬಗ್ಗೆಯೂ ಮಾಹಿತಿ ಬಯಲಾಗಿದೆ. ಜೊತೆಗೆ ನಾಗೇಂದ್ರ ರವರ ಹೆಂಡತಿಯನ್ನು ಸಹ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇನ್ನೂ ನಾಗೇಂದ್ರ ರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಪಡಿಸಿತ್ತು. ಈ ವೇಳೆ ಕೋರ್ಟ್ ಜು.18 ರವರೆಗೆ ಇಡಿ ಕಸ್ಟಡಿಗೆ ನೀಡಿದೆ.