ಕರ್ನಾಟಕದಲ್ಲಿ ಮುಡಾ ಹಗರಣ ಸಖತ್ ಸದ್ದು ಮಾಡುತ್ತಿದ್ದು, ಈ ಪ್ರಕರಣದ ಎ1 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ರವರ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸುತ್ತಿವೆ. ಇನ್ನೇನು ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳನ್ನು ಸಹ ಹಲವು ನಾಯಕರು ಹೇಳುತ್ತಿದ್ದಾರೆ. ಇದೀಗ ಕೇಂದ್ರ ಸಚಿವ ವಿ.ಸೋಮಣ್ಣ ಸಹ ಸಿದ್ದರಾಮಯ್ಯನವರ ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ. ನಮ್ಮಪ್ಪನ ಮೇಲಾಣೆ, ಸಿದ್ದರಾಮಯ್ಯ (Siddaramaiah) ಈ ಡಿಸೆಂಬರ್ ಮಾಹೆಯವರೆಗೆ ಮಾತ್ರ ಸಿಎಂ ಆಗಿರ್ತಾರೆ ಎಂದು ಸಚಿವ ವಿ.ಸೋಮಣ್ಣ ಭವಿಷ್ಯ ನುಡಿದಿದ್ದಾರೆ.
ಕೇಂದ್ರ ಸಚಿವ ವಿ.ಸೋಮಣ್ಣ ಚನ್ನಪಟ್ಟಣದ ಹೊಟ್ಟಿಗನ ಹೊಸಹಳ್ಳಿ ಗ್ರಾಮದಲ್ಲಿ ಮಾತನಾಡುತ್ತಾ, ರಾಜ್ಯ ಸರ್ಕಾರದ ಭ್ರಷ್ಟಾಚಾರ ದೇಶದ ಮೇಲೆ ಪರಿಣಾಮ ಬೀರುತ್ತಿದೆ. ಈ ಕಾರಣದಿಂದ ನಾವು ದೇಶದ ಎಲ್ಲಾ ಚುನಾವಣೆಗಳಲ್ಲೂ ಗೆಲ್ಲುತ್ತೇವೆ. ಸಿದ್ದರಾಮಯ್ಯನವರಿಗೆ ಶತ್ರುಗಳು ಅಂತಾ ಇದ್ದರೇ ಅದು ಕಾಂಗ್ರೇಸ್ ಪಕ್ಷದಲ್ಲೇ. ಮುಡಾ ಹಗರಣದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಈ ಡಿಸೆಂಬರ್ ವರೆಗೆ ಮಾತ್ರ ಸಿಎಂ ಆಗಿರ್ತಾರೆ ಎಂದರು. ಇದೇ ಸಮಯಲ್ಲಿ ಬಿ.ಎಸ್.ವೈ ಹಾಗೂ ಶ್ರೀರಾಮುಲು ವಿರುದ್ದದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಈ ಪಾಪದ ಕೆಲಸಕ್ಕೆ ಮುಂದಾಗಬೇಡಿ. ಕೋವಿಡ್ ಸಮಯದಲ್ಲಿ ನಾವೆಲ್ಲಾ ಪ್ರಾಣದ ಮೇಲಿನ ಹಂಗು ತೊರೆದು ಕೆಲಸ ಮಾಡಿದ್ದೇವೆ. ಯಾವ ರೀತಿ ಕೆಲಸ ಮಾಡಿದ್ದೇವೆ ಎಂಬುದನ್ನು ಜಾರ್ಜ್ ಹಾಗೂ ಬೈರತಿ ಸುರೇಶ್ ರವರನ್ನು ಕೇಳಿ. ನೀವು ಸಾವಿರಾರು ಕೋಟಿ ಹಗರಣಾ ಎಂದು ಹೇಳಿದ್ದಿರಿ. ಈಗ 14 ಕೋಟಿ ಅಂತ ಹೇಳ್ತೀರಾ. ನಿಮ್ಮ 14 ಸೈಟ್ ಬಗ್ಗೆ ನೋಡಿ. ಈ ಬಗ್ಗೆ ನಿರ್ಣಯ ಕೈಗೊಳ್ಳುವಷ್ಟರಲ್ಲಿ ನಿಮ್ಮ ಸಚಿವ ಸಂಪುಟವೇ ಇರೋದಿಲ್ಲ ಎಂದು ಗುಡುಗಿದರು.
ಬಳಿಕ ಚೆನ್ನಪಟ್ಟಣದ ಉಪಚುನಾವಣೆಯ ವಿಚಾರವಾಗಿ ಮಾತನಾಡುತ್ತಾ, ಕೃತಜ್ಞತೆಗೆ ಮತ್ತೊಂದು ಹೆಸರೇ ಚನ್ನಪಟ್ಟಣ. ಭಗೀರಥ ಎಂದ ಕೂಡಲೇ ಜನರು ದೇವೇಗೌಡರನ್ನು ನೆನಪಿಸಿಕೊಳ್ಳುತ್ತಾರೆ. ದೇವೇಗೌಡರ ದೂರದೃಷ್ಟಿ ಕಾರಣದಿಂದ 14 ಕ್ಷೇತ್ರಗಳನ್ನು ಗೆದ್ದಿದ್ದೇವೆ. ಇನ್ನೆರಡು ದಿನಗಳಲ್ಲಿ ಇಲ್ಲಿನ ಚಿತ್ರಣ ಸಂಪೂರ್ಣವಾಗಿ ಬದಲಾಗಲಿದೆ. ಚನ್ನಪಟ್ಟಣ ಜೆಡಿಎಸ್ ಭದ್ರಕೋಟೆ. ಯೋಗೇಶ್ವರ್ ಜನರನ್ನು ಪದೇ ಪದೇ ಯಾಮರಿಸಲು ಆಗಲ್ಲ. ಅವರನ್ನು ನಾಲ್ಕು ವರ್ಷ ಸುಮ್ಮನೆ ಕೂರುವಂತೆ ಮಾಡುತ್ತಾರೆ. ನಿಖಿಲ್ ಕುಮಾರಸ್ವಾಮಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ರಾಜ್ಯ ಕಾಂಗ್ರೇಸ್ ಸರ್ಕಾರಕ್ಕೆ ಜನರು ಎಚ್ಚರಿಕೆ ಗಂಟೆ ಕೊಡಬೇಕು ಎಂದು ಅರಿತಿದ್ದು, ಅದನ್ನು ಚನ್ನಪಟ್ಟಣದ ಜನತೆ ಕೊಡುತ್ತಾರೆ ಎಂದರು.