ಸ್ವಚ್ಚತೆ ಎಂಬುದು ಒಂದು ದಿನಕ್ಕೆ ಸೀಮಿತವಾಗಬಾರದು, ಬದಲಿಗೆ ಪ್ರತಿನಿತ್ಯ ಅದು ನಡೆಯುತ್ತಿರಬೇಕು ಆಗ ಮಾತ್ರ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳಬಹುದು, ಜೊತೆಗೆ ನಾವೂ ಸಹ ಆರೋಗ್ಯಕರವಾದ ಜೀವನ ಸಾಗಿಸಬಹುದು ಎಂದು ಗುಡಿಬಂಡೆ ಸಿವಿಲ್ ಮತ್ತು ಜೆಎಂಎಫ್.ಸಿ ನ್ಯಾಯಾಧೀಶರಾದ ಕೆ.ಎಂ.ಹರೀಶ್ ಸಲಹೆ ನೀಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಆಡಳಿತ, ವಕೀಲರ ಸಂಘ ಹಾಗೂ ಪಟ್ಟಣ ಪಂಚಾಯತಿ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಹಿ ಸೇವಾ ಅಭಿಯಾನ ನಿಮಿತ್ತ (Swachata Abhiyan) ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳು ವುದು ಎಲ್ಲರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದ್ದು, ಸ್ವಚ್ಛತೆ ಎಂಬುದು ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೆ ಪ್ರತಿ ನಿತ್ಯವೂ ನಿಮ್ಮ ನಿಮ್ಮ ಮನೆ, ಶಾಲಾ ಕಾಲೇಜು, ಕಚೇರಿಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡಬಹುದು. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವಲ್ಲಿ, ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡುವಲ್ಲಿ ಪೌರ ಕಾರ್ಮಿಕರ ಕಾರ್ಯ ಮೆಚ್ಚುವಂಥದ್ದು, ಹಸಿ ಕಸ, ಒಣ ಕಸ ಹಾಗೂ ಇತರೆ ತ್ಯಾಜ್ಯವನ್ನು ಬೆರ್ಪಡಿಸುವ ಮೂಲಕ, ಸ್ಥಳೀಯ ಕಸ ಸಂಗ್ರಹ ವಾಹನಗಳಿಗೆ ನೀಡುವ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಅವರ ಸೇವೆಯನ್ನು ಯಾರು ಮರೆಯಬಾರದು ಅವರನ್ನು ನಿರ್ಲಕ್ಷ್ಯ ಮಾಡದೇ ಅವರ ಕಾರ್ಯಕ್ಕೆ ಸಾಥ್ ನೀಡಬೇಕೆಂದು ಮನವಿ ಮಾಡಿದರು.
ಬಳಿಕ ವಕೀಲರ ಸಂಘದ ಅಧ್ಯಕ್ಷ ಎ.ರಾಮನಾಥ್ ರೆಡ್ಡಿ ಮಾತನಾಡಿ, ಸಾರ್ವಜನಿಕರು ತಮ್ಮ ಮನೆಯ ಆವರಣ, ಸುತ್ತ ಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆ ತ್ಯಜಿಸಬೇಕು, ಗ್ರಾಮೀಣ ಭಾಗಗಳಿಗಿಂತ ಪಟ್ಟಣ ವ್ಯಾಪ್ತಿಯಲ್ಲಿ ಸ್ವಚ್ಛತೆ ಕುರಿತು ಇನ್ನೂ ಹೆಚ್ಚಿನ ಮಟ್ಟದಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು. ಈ ಸಂದರ್ಭದಲ್ಲಿ ನ್ಯಾಯಧೀಶರು ಸ್ವಚ್ಛತೆ ಕಾಪಾಡುವ ಬಗ್ಗೆ ಪ್ರತಿಜ್ಞೆ ಬೋಧಿಸಿದರು. ಈ ಮೂಲಕ ಸ್ವಚ್ಛ ಭಾರತ್ ಮಿಷನ್ ಅನ್ನು ಯಶಸ್ವಿಗೊಳಿಸಲು ಕೈ ಜೋಡಿಸುವಂತೆ ಮನವಿ ಮಾಡಿದರು.
ಈ ವೇಳೆ ಪ.ಪಂ. ಮುಖ್ಯಾಧಿಕಾರಿ ಶ್ರೀನಿವಾಸ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎ.ರವೀಂದ್ರ, ವಕೀಲರ ಸಂಘದ ಉಪಾಧ್ಯಕ್ಷ ನಂದೀಶ್ವರ ರೆಡ್ಡಿ, ವಕೀಲ ಬಾಬಾಜಾನ್, ವಕೀಲರಾದ ಟಿ.ಸಿ.ಅಶ್ವತ್ಥರೆಡ್ಡಿ, ಬಾಬಾಜಾನ್, ನ್ಯಾಯಾಲಯದ ಶಿರಸ್ತೇದಾರ್ ನಟರಾಜ್, ಸತೀಶ್, ಹಿರಿಯ ಉಪನ್ಯಾಸಕ ಆರ್.ಜಿ.ಸೋಮಶೇಖರ್, ನ್ಯಾಯಾಲಯದ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೌರಕಾರ್ಮಿಕರು ಹಾಜರಿದ್ದರು.