Independence Day – ಇಂದಿನ ಯುವಜನತೆ ಸಿನೆಮಾ ನಟ-ನಟಿಯರು, ರಾಜಕೀಯ ನಾಯಕರಿಗಾಗಿ ದೊಡ್ಡ ದೊಡ್ಡ ಅಭಿಮಾನಿ ಬಳಗವನ್ನು ಕಟ್ಟುತ್ತಾರೆ. ಅದರ ಬದಲಿಗೆ ದೇಶಕ್ಕಾಗಿ ಮಡಿದಂತಹ ಅನೇಕ ಮಹನೀಯರು, ಯೋಧರಿಗೆ ನಾವು ಅಭಿಮಾನಿಗಳಾಗಬೇಕು, ಅವರ ಅಭಿಮಾನಿ ಸಂಘಗಳನ್ನು ಕಟ್ಟಬೇಕು ಎಂದು ಬಾಗೇಪಲ್ಲಿ-ಗುಡಿಬಂಡೆ-ಚೇಳೂರು ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
Independence Day – ದೇಶ ಕಾಯುವ ಯೋಧರನ್ನು ಸದಾ ನೆನಪಿಸಿಕೊಳ್ಳಬೇಕು : ಸುಬ್ಬಾರೆಡ್ಡಿ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 79ನೇ ಸ್ವಾತಂತ್ಯ್ರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜಕಾರಣಿ ಅಥವಾ ಸಿನೆಮಾ ಕಲಾವಿದರ ಹುಟ್ಟುಹಬ್ಬಗಳು ಬಂದರೇ ಸಾಕು ದೊಡ್ಡ ಮಟ್ಟದಲ್ಲಿ ಜನರು ಸೇರುತ್ತಾರೆ. ಅವರ ಹೆಸರಿನಲ್ಲಿ ಅಭಿಮಾನಿ ಬಳಗಗಳನ್ನು ಕಟ್ಟುತ್ತಾರೆ. ಆದರೆ ನಾವು ದೇಶದಲ್ಲಿ ನಿರ್ಭೀತಿಯಿಂದ ಬಾಳುವಂತೆ ಮಾಡಿದ ಗಡಿ ಕಾಯುವ ಯೋಧರ ಬಗ್ಗೆ ಮಾತ್ರ ನಿರ್ಲಕ್ಷ್ಯ ತೋರುತ್ತಿದ್ದೇವೆ. ಅದೇ ರೀತಿ ನಮ್ಮ ಧಾರ್ಮಿಕ ಹಬ್ಬಗಳನ್ನು ಸಹ ಅತ್ಯಂತ ಅದ್ದೂರಿಯಾಗಿ ಆಚರಿಸುತ್ತೇವೆ. ರಾಷ್ಟ್ರೀಯ ಹಬ್ಬಗಳಲ್ಲಿ ಮಾತ್ರ ಜನರು ಭಾಗವಹಿಸುವುದಿಲ್ಲ. ರಾಷ್ಟ್ರೀಯ ಹಬ್ಬಗಳು ಒಂದು ರೀತಿಯಲ್ಲಿ ಅಧಿಕಾರಿಗಳು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾದಂತಿದೆ. ಇನ್ನು ಮುಂದೆಯಾದರೂ ಎಲ್ಲರೂ ದೇಶ (Independence Day) ಕಾಯುವ ಯೋಧರನ್ನು ಸದಾ ನೆನಪಿಸಿಕೊಳ್ಳೋಣ ಜೊತೆಗೆ ರಾಷ್ಟ್ರೀಯ ಹಬ್ಬಗಳನ್ನು ಅದ್ದೂರಿಯಾಗಿ ಎಲ್ಲರೂ ಸೇರಿ ಆಚರಿಸೋಣ ಎಂದರು.
ಗುಡಿಬಂಡೆ ಸರ್ವತೋಮುಖ ಅಭಿವೃದ್ದಿಗೆ ಆದ್ಯತೆ
ಇನ್ನೂ ಗುಡಿಬಂಡೆ ತಾಲೂಕಿನ ಸರ್ವತೋಮುಖ ಅಭಿವೃದ್ದಿಯೇ ನನ್ನ ಪ್ರಮುಖ ಗುರಿಯಾಗಿದೆ. ಗುಡಿಬಂಡೆ ಅಮಾನಿ ಬೈರ ಸಾಗರ ಕೆರೆ ಕೋಡಿ ಬಳಿ ಸೇತುವೆ ನಿರ್ಮಾಣ ಮಾಡಲು ಇಲ್ಲಿನ ಜನರ ಬೇಡಿಕೆಯಾಗಿತ್ತು. ಅದರಂತೆ ಇದೀಗ 10 ಕೋಟಿ ಅನುದಾನವನ್ನು ಸೇತುವೆ ನಿರ್ಮಾಣಕ್ಕೆ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಈ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುತ್ತೇನೆ. ಜೊತೆಗೆ ಗುಡಿಬಂಡೆಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 5 ಕೋಟಿ ಅನುದಾನ ಬಿಡುಗಡೆಯಾಗುತ್ತದೆ. ಶೀಘ್ರದಲ್ಲೇ ಈ ಕಾಮಗಾರಿಗೂ ಭೂಮಿ ಪೂಜೆ ನೆರವೇರಿಸುತ್ತೇನೆ. ಹೀಗೆ ಹಂತ ಹಂತವಾಗಿ ಗುಡಿಬಂಡೆಯನ್ನು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದರು.
ಸ್ವತಂತ್ರ ಎಂದರೇ ಏನು ಎಂಬುದನ್ನು ಎಲ್ಲರೂ ತಿಳಿಯಬೇಕು : ವಿಜಯ್
ಬಳಿಕ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಆದರ್ಶ ವಿದ್ಯಾಲಯದ ಕನ್ನಡ ಶಿಕ್ಷಕ ಡಾ.ವಿಜಯ್ ಕುಮಾರ್, ಇಂದು ನಾವು ನಿಜವಾದ ಸ್ವಾತಂತ್ಯ್ರ ಎಂದರೇ ಏನು ಎಂಬುದನ್ನು ತಿಳಿದುಕೊಳ್ಳಬೇಕಿದೆ. ಸುಮಾರು ವರ್ಷಗಳ ಕಾಲ ನಮ್ಮ ಭಾರತವನ್ನು ಕೇವಲ ಬ್ರಿಟೀಷರು ಮಾತ್ರವಲ್ಲ ಅನೇಕರು ಆಳುವ ಮೂಲಕ ನಮ್ಮ ಮೇಲೆ ದೌರ್ಜನ್ಯವೆಸಗಿದ್ದಾರೆ. ಆದರೆ ಬ್ರಿಟೀಷರು ಹೆಚ್ಚು ಕಾಲ ನಮ್ಮ ದೇಶವನ್ನು ಆಳಿದ್ದಾರೆ. ಭಗತ್ ಸಿಂಗ್, (Independence Day) ಸುಭಾಷ್ ಚಂದ್ರಬೋಸ್, ಮಹಾತ್ಮ ಗಾಂಧಿ ಸೇರಿದಂತೆ ಅನೇಕರು ದೇಶಕ್ಕೆ ಸ್ವಾತಂತ್ಯ್ರ ತಂದುಕೊಡಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಇಂದು ಭಾರತದ ಸೇನಾ ಶಕ್ತಿ ಇಡೀ ವಿಶ್ವಕ್ಕೆ ಏನು ಎಂಬುದನ್ನು ಆಪರೇಷನ್ ಸಿಂಧೂರ ಮೂಲಕ ತೋರಿಸಿಕೊಟ್ಟಿದೆ ಎಂದರು. Read this also : ಹೊಸ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ…!
ದೇಶಭಕ್ತಿ ಗೀತೆಗಳ ನೃತ್ಯದ ಮೂಲಕ ಕಾರ್ಯಕ್ರಮಕ್ಕೆ ಮೆರಗು
ತಹಸೀಲ್ದಾರ್ ಸಿಗ್ಬತ್ತುಲ್ಲಾ 79ನೇ ಸ್ವತಂತ್ರ ದಿನಾಚರಣೆಯ ಧ್ವಜಾರೋಹಣೆಯನ್ನು (Independence Day) ನೆರವೇರಿಸಿ ಮಾತನಾಡಿದರು, ಇನ್ನೂ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ರೂಪಕಗಳನ್ನು ಪ್ರದರ್ಶನ ಮಾಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದುಕೊಟ್ಟರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ತಾಪಂ ಇಒ ನಾಗಮಣಿ, ಪಪಂ ಅಧ್ಯಕ್ಷ ವಿಕಾಸ್, ಬಿಇಒ ಕೃಷ್ಣಕುಮಾರಿ, ಆರಕ್ಷಕ ವೃತ್ತ ನೀರಿಕ್ಷಕ ನಯಾಜ್ ಬೇಗ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗ, ವಿವಿಧ ಶಾಲೆಗಳ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹಲವರು ಇದ್ದರು.