ಮೈಸೂರಿನ ಕೆ.ಆರ್.ನಗರ ಠಾಣೆಯಲ್ಲಿ ದಾಖಲಾದ ಕಿಡ್ನಾಪ್ ಹಾಗೂ ದೌರ್ಜನ್ಯ ಪ್ರಕರಣದಡಿ ಮಾಜಿ ಸಚಿವ ರೇವಣ್ಣರವರನ್ನು ಎಸ್.ಐ.ಟಿ ವಶಕ್ಕೆ ಪಡೆದಿದೆ. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸದಿಂದ ರೇವಣ್ಣರನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು ಶನಿವಾರ ಸಂಜೆ ವಶಕ್ಕೆ ಪಡೆದು ಬಂಧನ ಮಾಡಿದ್ದಾರೆ. ಎಸ್.ಐ.ಟಿ ಅಧಿಕಾರಿಗಳು ರೇವಣ್ಣರವನ್ನು ನೇರವಾಗಿ ಕಾರ್ಲಟನ್ ಭವನದಲ್ಲಿರುವ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಹೆಚ್.ಡಿ. ರೇವಣ್ಣ ವಿರುದ್ದ ಮೈಸೂರು ಜಿಲ್ಲೆ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಗ ದೂರು ದಾಖಲಿಸಿದ್ದರು. ರೇವಣ್ಣ ಹಾಗೂ ಸತೀಶ್ ಬಾಬಣ್ಣ ಎಂಬುವವರ ವಿರುದ್ದ ದೂರು ದಾಖಲಿಸಿದ್ದರು. ಬಾಬಣ್ಣ ಎಂಬಾತ ನಮ್ಮ ಮನೆಗೆ ಬಂದು ಭವಾನಿ ಅಕ್ಕ ಕರೆಯುತ್ತಿದ್ದಾರೆ ಎಂದು ನಮ್ಮ ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ. ಅಂದಿನಿಂದ ನನ್ನ ತಾಯಿ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಾಗಿತ್ತು. ಬಳಿಕ ಈ ಕುರಿತು ತನಿಖೆ ನಡೆಸಿದ ಪೊಲೀಸರು ಸಂತ್ರಸ್ತೆಯನ್ನು ಪತ್ತೆ ಹಚ್ಚಿ ಬೆಂಗಳೂರಿಗೆ ಕರೆತಂದಿದ್ದರು. ಇನ್ನೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ರೇವಣ್ಣರವರಿಗೆ ನಿರೀಕ್ಷಣಾ ಜಾಮೀನು ತಿರಸ್ಕೃತಗೊಂಡ ಬೆನ್ನಲ್ಲೇ ಅವರನ್ನು ಎಸ್.ಐ.ಟಿ ಅಧಿಕಾರಿಗಳು ತಲಾಶ್ ನಡೆಸಿದ್ದರು. ಈ ಸಮಯದಲ್ಲಿ ರೇವಣ್ಣ ದೇವೇಗೌಡರ ಮನೆಯಲ್ಲಿರುವುದು ತಿಳಿದು, ಎರಡು ಕಾರುಗಳಲ್ಲಿ ಐದಕ್ಕೂ ಹೆಚ್ಚು ಮಂದಿ ಅಧಿಕಾರಿಗಳು ದೌಡಾಯಿಸಿ ರೇವಣ್ಣರವನ್ನು ಬಂಧಿಸಿದ್ದಾರೆ.
ಇನ್ನೂ ಅಧಿಕಾರಿಗಳು ರೇವಣ್ಣರವರನ್ನು ಬಂಧಿಸಲು ಹೋಗಿದ್ದು, 15 ನಿಮಿಷವಾದರೂ ರೇವಣ್ಣ ಹೊರಬಂದಿಲ್ಲ. ಬಳಿಕ ಅವರೇ ಬಾಗಿಲು ತೆರೆದು ಹೊರಬಂದರು. ಕೂಡಲೇ ರೇವಣ್ಣರವರನ್ನು ವಶಕ್ಕೆ ಪಡೆದು ಕಾರ್ಲಟನ್ ಭವನದಲ್ಲಿರುವ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ರೇವಣ್ಣ ಬಂಧನದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎಸ್.ಐ.ಟಿ. ಕಚೇರಿ ಬಳಿ ಕಾರ್ಲಟನ್ ಭವನದ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ನಾವು ಇದರಲ್ಲಿ ಮಧ್ಯಪ್ರವೇಶ ಮಾಡಲ್ಲ ಎಂದ ಸಿಎಂ: ಇನ್ನೂ ಸಚಿವ ರೇವಣ್ಣ ಬಂಧನದ ಪ್ರಕರಣದಲ್ಲಿ ನಾವು ಮಧ್ಯಪ್ರವೇಶ ಮಾಡೊಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಚಿಕ್ಕೋಡಿಯಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ನಾನು ಪೊಲೀಸರ ಜೊತೆ ಮಾತನಾಡುತ್ತೇನೆ. ಅವರು ಅಪಹರಣ ಪ್ರಕರಣವೊಂದರ ಕುರಿತು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಆದರೆ ಅವರ ಅರ್ಜಿ ವಜಾ ಆಗಿದೆ. ಜಾಮೀನು ಸಿಕ್ಕಿಲ್ಲ ಈ ಕಾರಣದಿಂದ ಅವರನ್ನು ಕಷ್ಟಡಿಗೆ ತೆಗೆದುಕೊಂಡಿಬೇಕು ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ.