ಇಂದಿಗೂ ಸಹ ಅನೇಕ ಮಹಿಳೆಯರು ಸಂತಾನ ಭಾಗ್ಯವಿಲ್ಲದೇ ದೇವರು, ಆಸ್ಪತ್ರೆಗಳ ಮೊರೆ ಹೋಗುತ್ತಿರುವುದನ್ನು ನೋಡುತ್ತಿರುತ್ತೇವೆ. ಆದರೆ ಕೆಲವರು ತಮ್ಮದೇ ಆದ ಕಾರಣಗಳಿಂದ ನವಜಾತ ಶಿಶುಗಳನ್ನೆ ಚರಂಡಿ, ಕಸದ ತೊಟ್ಟಿಗಳಲ್ಲಿ ಎಸೆದು ಹೋಗುತ್ತಿದ್ದಾರೆ. ಅಂತಹ ಅನೇಕ ಘಟನೆಗಳು ನಡೆದಿದೆ. ಇದೀಗ ಈ ಸಾಲಿಗೆ ಮತ್ತೊಂದು ಘಟನೆ ಸೇರಿಕೊಂಡಿದೆ. ರೈಲಿನ ಬೋಗಿಯೊಂದರ ಡಸ್ಟ್ ಬಿನ್ ನಲ್ಲಿ ಆಗತಾನೆ ಹುಟ್ಟಿದ ಮಗುವನ್ನು ಎಸೆದಿದ್ದಾರೆ. ಈ ಮಗುವಿನ ಮೈ ಮೇಲೆ ತುಂಡು ಬಟ್ಟೆ ಸಹ ಇಲ್ಲದೇ ನರಳಿ ನರಳಿ ಪ್ರಾಣ ಬಿಟ್ಟಿದೆ ಎಂದು ಹೇಳಲಾಗುತ್ತಿದೆ.
ಒಡಿಶಾದ ಭುವನೇಶ್ವರದಿಂದ ಬೆಂಗಳೂರಿಗೆ ಬಂದ ಪ್ರಶಾಂತಿ ಎಕ್ಸ್ ಪ್ರೆಸ್ ರೈಲಿನ ಬೋಗಿಯ ಡಸ್ಟ್ ಬಿನ್ ನಲ್ಲೇ ನವಜಾತ ಗಂಡು ಮಗುವಿನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಯಲಂಹಕ ನಿಲ್ದಾಣದಲ್ಲಿ ನಿಂತಿದ್ದ ಪ್ರಶಾಂತಿ ಎಕ್ಸ್ ಪ್ರೆಸ್ ರೈಲಿನ ಡಸ್ಟ್ ಬಿನ್ ನಲ್ಲಿ ನವಜಾತು ಶಿಶುವಿನ ಮೃತದೇಹ ಪತ್ತೆಯಾಗಿದೆ. ಮಗು ಹುಟ್ಟಿದ ನಾಲ್ಕೈದು ಗಂಟೆಗಳ ಬಳಿಕ ಅದನ್ನು ಕಸದ ತೊಟ್ಟಿಯಲ್ಲಿ ಬಿಸಾಡಿದ್ದಾರೆ ಎಂದು ಹೇಳಲಾಗಿದೆ. ಕಸದ ತೊಟ್ಟಿಯಲ್ಲಿ ಕೈ ಕಾಲು ಸಹ ಆಡಿಸಲೂ ಆಗದಂತಹ ಇಕ್ಕಟಿನ ಜಾಗದಲ್ಲಿ ಮಗುವನ್ನು ಹಾಕಿದ್ದಾರೆ. ಕಸದ ಡಬ್ಬಿಯಲ್ಲಿ ಮಗುವನ್ನು ಹಾಕಿ ಮುಚ್ಚಲಾಗಿದೆ. ಇದರಿಂದ ಮಗು ಉಸಿರಾಡೋಕು ಆಗದೇ, ಚಳಿ ಹಾಗೂ ಗಾಳಿಗೆ ನರಳಿದೆ, ಕಸದ ತೊಟ್ಟಿಯಲ್ಲಿದ್ದ ಜಿರಳೆ, ಇರುವೆ, ಕ್ರಿಮಿ ಕೀಟಗಳು ಕಚ್ಚಿ ಮಗು ನರಳಿ ಕೊನೆಯುಸಿರು ಎಳೆದಿದೆ ಎಂದು ಹೇಳಲಾಗಿದೆ.
ಇನ್ನೂ ಈ ಘಟನೆ ಕಳೆದೆರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ಪ್ರಶಾಂತಿ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನೂ ಈ ಮನಕಲಕುವಂತಹ ದೃಶ್ಯ ನೋಡಿದ ಪ್ರಯಾಣಿಕರು ಸೇರಿದಂತೆ ಅನೇಕರು ಕಣ್ಣೀರಾಕಿದ್ದಾರೆ. ಪ್ರಯಾಣಿಕರ ಮಾಹಿತಿಯ ಮೇರೆಗೆ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಮಗುವನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದಾಗಲೇ ಮಗು ಸಾವನ್ನಪ್ಪಿತ್ತು ಎನ್ನಲಾಗಿದೆ. ಇನ್ನೂ ಮೃತ ನವಜಾತ ಶಿಶುವಿನ ದೇಹವನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ಸಂಬಂಧ ರೈಲ್ವೆ ಪೊಲೀಸರು ಮೃತದೇಹ ಪತ್ತೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.