ಮುಡಾ ಹಗರಣಕ್ಕೆ (Muda Scam) ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಅವರ ಪತ್ನಿ ವಿರುದ್ಧ ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ಎಫ್‌ಐಆರ್ (FIR) ದಾಖಲಾಗಿದೆ. ಈ ಸಂಬಂಧ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡುವಂತೆ ವಿಪಕ್ಷಗಳು ಆಗ್ರಹಿಸುತ್ತಿವೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ (Siddaramaiah) ತಮ್ಮ ಪತ್ನಿ ಹೆಸರಲ್ಲಿ ಬೆಳಗಾವಿಯ ಪ್ರಸಿದ್ಧ ತೀರ್ಥ ಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ತಾವೇ ಹಣೆಗೆ ಕುಂಕುಮ ಹಚ್ಚಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್ ಅವರು ಬೆಳಗಾವಿಯಲ್ಲಿರೋ ಪ್ರಸಿದ್ಧ ತೀರ್ಥ ಕ್ಷೇತ್ರ ಸವದತ್ತಿ ಯಲ್ಲಮ್ಮನ ದೇಗುಲಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಬಳಿಕ ಸಿಎಂ ವಿಶೇಷ ಪೂಜೆ ಸಲ್ಲಿಸಿದರು. ಸಿದ್ದರಾಮಯ್ಯ ಬರುತ್ತಿದ್ದಂತೆ ವಿಶೇಷ ಅರ್ಚನೆ ಮಾಡಿದ ಅರ್ಚಕರು, ಆರತಿ ಆಗುವವರೆಗೆ ಗರ್ಭಗುಡಿಯಲ್ಲೇ ನಿಂತು ದರ್ಶನ ಪಡೆದುಕೊಂಡರು. ಆರತಿ ತಟ್ಟೆಗೆ 500 ರೂ. ನೋಟು ಹಾಕಿದರು. ಈ ವೇಳೆ ಪತ್ನಿ ಪಾರ್ವತಿ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಹಣೆಗೆ ತಾವೇ ಕುಂಕುಮ ಹಚ್ಚಿಕೊಂಡರು.
ಇನ್ನೂ ಗರ್ಭಗುಡಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ರವರು ಸಾಷ್ಟಾಂಗ ನಮಸ್ಕಾರ ಹಾಕಿದರು. ಡಿಕೆಶಿ ಯವರು ದೇವಿ ಮುಂದೆ ಸುಮಾರು 10 ನಿಮಿಷ ಕುಳಿತು ಪ್ರಾರ್ಥನೆ ಸಲ್ಲಿಸಿದ್ದರು. ಬಳಿಕ ಪೂಜೆ ಮುಗಿಸಿ ಡಿಸಿಎಂ ಬರುವವರೆಗೂ ಸಿಎಂ ಸಿದ್ದರಾಮಯ್ಯನವರು ಕಾದು ನಿಂತಿದ್ದ ಪ್ರಸಂಗ ಕೂಡ ನಡೆಯಿತು. ಸಿಎಂ ಸಿದ್ದರಾಮಯ್ಯ ರೇಣುಕಾ ಯಲ್ಲಮ್ಮ ದೇವಿ ದರ್ಶನ ಪಡೆಯುವಾಗ ವೇತನ ಹೆಚ್ಚಿಸುವಂತೆ ಅರ್ಚಕರು ಮನವಿ ನೀಡಿದರು. ಈ ವೇಳೆ ಸಂಬಂಧಪಟ್ಟವರ ಜೊತೆಗೆ ಮಾತನಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ಇದೇ ಸಮಯದಲ್ಲಿ ವ್ಯಕ್ತಿಯೋರ್ವ ಮೂರು ಡಿಸಿಗಳು ಬದಲಾದರೂ ಇನ್ನೂ ಕೆಲಸ ಆಗಿಲ್ಲ ಎಂದು ಅಳಲು ತೋಡಿಕೊಂಡ. ಈ ಸಮಯದಲ್ಲಿ ಎಲ್ಲಿದ್ದೇವೆ ಗೊತ್ತಾಗೊಲ್ವಾ ಎಂದು ಥೂ ಎಂದು ಗದರಿ ಮುಂದೆ ಸಾಗಿದ್ದರು. ರೇಣುಕಾ ಯಲ್ಲಮ್ಮ ದೇವಿಯ ದರ್ಶನದ ಬಳಿಕ ಅತಿಥಿ ಗೃಹವನ್ನು ಸಿಎಂ ಉದ್ಘಾಟಿಸಿದರು. ನಂತರ ಮಾದ್ಯಮದವರನ್ನು ಹೊರಗಿಟ್ಟು ಪ್ರವಾಸೋದ್ಯಮ ಇಲಾಖೆಯ ಅಧಿಖಾರಿಗಳ ಜೊತೆಗೆ ಸಭೆ ಸಹ ನಡೆಸಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಸತೀಶ ಜಾರಕಿಹೊಳಿ, ರಾಮಲಿಂಗಾರಡ್ಡಿ, ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕರಾದ ವಿಶ್ವಾಸ ವೈದ್ಯ, ಬಾಬಾಸಾಹೇಬ್ ಪಾಟೀಲ, ಆಸೀಫ್ ಸೇಠ್, ಚನ್ನರಾಜ್ ಹಟ್ಟಿಹೊಳಿ ಸಾಥ್ ನೀಡಿದರು.