Covid Scam : ಕೋವಿಡ್ – 19 ಸಮಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ನಡೆದಿದೆ ಎನ್ನಲಾದ ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸಚಿವ ಸಂಪುಟ ವಿಶೇಷ ತನಿಖಾ ತಂಡ (SIT) ರಚನೆ ಮಾಡಲು ತೀರ್ಮಾನಿಸಿದೆ. ಕೋವಿಡ್-19 ಅಕ್ರಮದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ಆಯೋಗದ ಮಧ್ಯಂತರ ವರದಿ ಮಾಹಿತಿ ಆಧಾರವಾಗಿಸಿಕೊಂಡು ಎಸ್.ಐ.ಟಿ ರಚನೆ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರ್ಕಾರ ಕೋವಿಡ್ ಹಗರಣದ ತನಿಖೆಗಾಗಿ ನ್ಯಾ. ಮೈಕಲ್ ಡಿ ಕುನ್ಹಾ ಆಯೋಗವನ್ನು ರಚನೆ ಮಾಡಿತ್ತು. ಈ ಆಯೋಗವು ತನ್ನ ಮಧ್ಯಂತರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ವರದಿಯಲ್ಲಿ 18 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ಹಗರಣವನ್ನು ತನಿಖೆ ನಡೆಸಲು SIT ರಚನೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ನಂತರ ಈ ಕುರಿತು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಕೊವಿಡ್ ವೇಳೆ ಕಿಟ್, ಔಷಧಿ ಖರೀದಿ ವೇಳೆ ಅಕ್ರಮ ನಡೆದಿದೆ. ಕೊವಿಡ್ ಹಗರಣ ಸಂಬಂಧ ಹಲವು ದೂರುಗಳು ದಾಖಲಾಗಿದ್ದವು. ಕೊವಿಡ್ ಹಗರಣದ ತನಿಖೆಗೆ ಎಸ್ಐಟಿ ರಚನೆ ಮಾಡಲಾಗುವುದು. ವರದಿ ಆಧರಿಸಿ ಎಸ್ಐಟಿ ತನಿಖೆ ಆಗಲಿದೆ . ಅಗತ್ಯ ಬಿದ್ದರೆ FIR ದಾಖಲಾಗುತ್ತೆ, ಚಾರ್ಜ್ಶೀಟ್ ಕೂಡ ಹಾಕ್ತೇವೆ. ಯಾರ ವಿರುದ್ಧ FIR ದಾಖಲಿಸಬೇಕೆಂದು SIT ನಿರ್ಧರಿಸುತ್ತದೆ. ಐಜಿ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಲಾಗುತ್ತದೆ. ಆಯೋಗದ ಮಾಹಿತಿ ಆಧಾರದ ಮೇರೆಗೆ ತನಿಖೆ ಮಾಡಲಾಗುವುದು. ಅಗತ್ಯಬಿದ್ದರೆ ಆಯೋಗದ ವರದಿಯ ಮಾಹಿತಿ ಹೊರತಾಗಿ ಪುನಃ ತನಿಖೆ ಮಾಡಿ, ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯ ಪೋಸ್ಟ್ ಇಲ್ಲಿದೆ ನೋಡಿ: Click Here
ಇನ್ನೂ ಕೋವಿಡ್ ಹಗರಣ ನಡೆದಿದೆ ಎಂದು ಹೇಳಲಾಗುತ್ತಿರುವ ಸಮಯದಲ್ಲಿ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ಹಲವರಿಗೆ ಸಂಕಷ್ಟ ಎದುರಾಗಬಹುದು ಎನ್ನಲಾಗಿದೆ. ಜೊತೆಗೆ ಸಂಸದರಾಗಿರುವ ಡಾ.ಸಿ.ಎನ್.ಮಂಜುನಾಥ್ ರವರಿಗೂ ಸಂಕಷ್ಟ ಎದುರಾಗಬಹುದಾಗಿದೆ. ಕೋವಿಡ್ ಸಮಯದಲ್ಲಿ ಡಾ.ಸಿ.ಎನ್.ಮಂಜುನಾಥ್ ರವರು ಕೋವಿಡ್ ಟಾಸ್ಕ್ ಪೋರ್ಸ್ ಕಮಿಟಿಯ ಮುಖ್ಯಸ್ಥರಾಗಿದ್ದರು. ಈ ಟಾಸ್ಕ್ ಪೋರ್ಸ್ ನಿರ್ಣಯ ತೆಗೆದುಕೊಂಡಂತೆ ಕೆಲವೊಂದು ಉಪಕರಣಗಳು ಖರೀದಿಯಾಗಿದೆ. ಆದ್ದರಿಂದ ಮಂಜುನಾಥ್ ರವರಿಗೂ ಸಹ ಸಂಕಷ್ಟ ಎದುರಾಗಬಹುದು ಎನ್ನಲಾಗಿದೆ.