ಗುಡಿಬಂಡೆ: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿದ್ದು, ಮಕ್ಕಳಿಗೆ ಶಿಕ್ಷಣಾವ್ಯವಸ್ಥೆಯಿಂದಲೇ ಚುನಾವಣೆಯ ಕುರಿತು ಅರಿವು ಮೂಡಿಸುವುದು ಅಗತ್ಯವಾಗಿದೆ, ಈ ಕಾರಣದಿಂದಲೇ ಶಾಲೆಗಳಲ್ಲಿ ಶಾಲಾ ಸಂಸತ್ ಚುನಾವಣೆ (Shala Samsath Chunavane) ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಮಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಮಂಜಾನಾಯ್ಕ ತಿಳಿಸಿದರು.
ತಾಲೂಕಿನ ಮಾಚಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾರರ ಸಾಕ್ಷರತಾ ಕ್ಲಬ್ ಅಡಿಯಲ್ಲಿ ಆಯೋಜಿಸಿದ್ದ ಶಾಲಾ ಸಂಸತ್ ಚುನಾವಣೆ (Shala Samsath Chunavane) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಪ್ರಜಾಪ್ರಭುತ್ವದಲ್ಲಿನ ಹಕ್ಕು-ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದು, ಕಡ್ಡಾಯ ಮತ್ತು ರಹಸ್ಯ ಮತದಾನಗಳ ಬಗ್ಗೆ ಜಾಗೃತಿ ಮೂಡಿಸುವುದು, ಮತದಾನದಿಂದ ಯಾರೂವಂಚಿತರಾಗದಂತೆ ಮತದಾರರ ಪಟ್ಟಿಗೆ ಮತದಾರರ ಸೇರ್ಪಡೆಗೊಳಿಸುವ ಬಗ್ಗೆ ಪ್ರಚಾರಮಾಡುವುದು, ಮಕ್ಕಳಲ್ಲಿ ಬಾಲ್ಯದಿಂದಲೇ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸುವುದು, ತಮ್ಮ ಹಕ್ಕುಗಳ ಬಗ್ಗೆ ಅರಿತು ಅದರ ಬಗ್ಗೆ ಧ್ವನಿ ಎತ್ತುವುದು, ತಮ್ಮ ಶಾಲೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದು ಸೇರಿದಂತೆ ಉತ್ತಮ ಪ್ರತಿನಿಧಿಗಳ ಆಯ್ಕೆಯ ಮೂಲಕ ಸದೃಡರಾಷ್ಟ್ರ ಕಟ್ಟಬೇಕೆಂಬ ಉದ್ದೇಶದಿಂದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಮಾದರಿ ಸಂಸತ್ ರಚನೆ ಅಗತ್ಯಮತ್ತು ಸಹಕಾರಿಯಾಗಿದೆ ಎಂದರು.
ಹಬ್ಬದ ವಾತಾವರಣ ಸೃಷ್ಟಿಸಿದ ಶಾಲಾ ಸಂಸತ್ (Shala Samsath Chunavane): ಇನ್ನೂ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ಸಂಸತ್ ಚುನಾವಣೆ ಒಂದು ಮಾದರಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತ್ತು. ಜೊತೆಗೆ ಸಾಮಾನ್ಯ ಚುನಾವಣೆಗಳಂತೆ ಭಾಸವಾಗಿದ್ದು ವಿಶೇಷವಾಗಿತ್ತು. ಅಬ್ಬರದ ಪ್ರಚಾರ, ಪರ-ವಿರೋಧ ಪಕ್ಷಗಳ ಆರೋಪ-ಪ್ರತ್ಯಾರೋಪಗಳ ಸುರಿಮಳೆ, ಮತದಾರರ ಓಲೈಕೆ, ಮತ ಚಲಾಯಿಸಲು ಮತಗಟ್ಟೆ ಮುಂದೆ ಸಾಲು ಗಟ್ಟಿ ನಿಂತಿರುವ ಮತದಾರರು, ತಮ್ಮ ಮತದಾನದ ಹಕ್ಕು ಚಲಾಯಿಸಲು ಮತದಾರರಲ್ಲಿನ ಉತ್ಸಾಹ, ಸ್ಪರ್ಧೆ ಮಾಡಿದ ಅಭ್ಯರ್ಥಿಗಳಲ್ಲಿ ಕಂಡ ಹುಮ್ಮಸ್ಸು ಎಲ್ಲವೂ ಸಾಮಾನ್ಯ ಚುನಾವಣೆಗಳಂತೆ ಭಾಸವಾಗಿತ್ತು. ಇದೇ ಸಮಯದಲ್ಲಿ ಮತದಾನದ ಮಹತ್ವ ಸಾರುವಂತಹ ಚುನಾವಣಾ ಗೀತೆಯನ್ನು ಹಾಡುವ ಮೂಲಕ ಚುನಾವಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಇನ್ನೂ ಮತದಾನದ ಬಳಿಕ ಸಂಸತ್ ರಚನೆ, ಖಾತೆಗಳ ಹಂಚಿಕೆ, ಪ್ರಮಾಣ ಸ್ವೀಕಾರದಂತಹ ಪ್ರಕ್ರಿಯೆಗಳನ್ನು ಸಹ ನಡೆಸಲಾಯಿತು. ಮಕ್ಕಳೇ ಚುನಾವಣಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸಿದರು. ಈ ಸಮಯದಲ್ಲಿ ಶಾಲೆಯ ಶಿಕ್ಷಕರಾದ ಪ್ರಮೋದ ಕುಮಾರ ಮಠಪತಿ, ಎಲ್.ಚಂದ್ರಶೇಖರ್, ಜಯಮ್ಮ, ಹಸೀನಾ ಭಾನು, ಸೋಮಶೇಖರ್, ನವ್ಯ, ಫರ್ನಾಜ್ ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು.