ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ದ ಅಸಹಜ ಲೈಂಗಿಕ ದೌರ್ಜನ್ಯ ಆರೋಪದಡಿ ಹಾಸನದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶನಿವಾರ ಸಂತ್ರಸ್ತ ನೀಡಿದ್ದ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧ), ಸೆಕ್ಷನ್ 342 (ತಪ್ಪಾದ ಬಂಧನಕ್ಕೆ ಶಿಕ್ಷೆ) ಹಾಗೂ ಸೆಕ್ಷನ್ 506 (ಬೆದರಿಕೆ) ಗಳಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸಂತ್ರಸ್ತ ಡಿಜಿಪಿ ಕಚೇರಿಯಲ್ಲಿ ದೂರು ನೀಡಿದ್ದು, ಈ ಪ್ರತಿಯನ್ನು ಹಾಸನದ ಎಸ್.ಪಿ. ಕಚೇರಿಗೂ ಮೇಲ್ ಮಾಡಲಾಗಿತ್ತು.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಹೋದರ ಎಂ.ಎಲ್.ಸಿ ಸೂರಜ್ ರೇವಣ್ಣ ತಮ್ಮ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಅರಕಲಗೂಡ ಮೂಲದ ಜೆಡಿಎಸ್ ಕಾರ್ಯಕರ್ತರೊಬ್ಬರು ಆರೋಪಿಸಿದ್ದರು. ಶನಿವಾರ ಹೊಳೆನರಸಿಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನಂತೆ ಸೂರಜ್ ರೇವಣ್ಣ ವಿರುದ್ದ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಇನ್ನೂ ದೂರುದಾರ ತಮ್ಮನ್ನು ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡುವ ಸಲುವಾಗಿ ಸೂರಜ್ ರೇವಣ್ಣ ಹಾಸನದ ಸೆನ್ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ವೇಳೆ ಪೊಲೀಸರು ಸೂರಜ್ ರೇವಣ್ಣ ರವರನ್ನು ಮುಂಜಾನೆ 4 ಗಂಟೆಯವರೆಗೆ ಸೂರಜ್ ರನ್ನು ವಿಚಾರಣೆ ನಡೆಸಿದ್ದರು. ವಿಚಾರಣೆಯ ಬಳಿಕ ಪೊಲೀಸರು ಸೂರಜ್ ರನ್ನು ಬಂಧನ ಮಾಡಿದ್ದಾರೆ.
ಇನ್ನೂ ಸಂತ್ರಸ್ತ ದೂರುದಾರ ಜೆಡಿಎಸ್ ಕಾರ್ಯಕರ್ತನಾಗಿದ್ದ. ಸೂರಜ್ ರೇವಣ್ಣಗೆ ಪರಿಚಿತ. ತನಗೆ ಕೆಲಸ ಕೊಡಿಸುವಂತೆ ಜೂ.16 ರಂದು ಸೂರಜ್ ರವರ ಗನ್ನಿಕಡ ಫಾರಂಹೌಸ್ ಗೆ ತೆರಳಿದ್ದ ಎನ್ನಲಾಗಿದೆ. ಈ ಸಮಯದಲ್ಲೇ ಸೂರಜ್ ನನ್ನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಸಂತ್ರಸ್ತ ದೂರಿನಲ್ಲಿ ಆರೋಪಿಸಿದ್ದಾನೆ. ಈ ನಡುವೆ ಸೂರಜ್ ರೇವಣ್ಣರವರ ಆಪ್ತ ಹನುಮನಹಳ್ಳಿಯ ಶಿವಕುಮಾರ್ ಎಂಬಾತ ದೂರುದಾರನ ವಿರುದ್ದ ಹೊಳೆನರಸೀಪುರದಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ದೂರುದಾರ ಜೂ.16 ರಂದು ಸೂರಜ್ ರವರ ಬಳಿ ಕೆಲಸ ಕೇಳಲು ಬಂದಿದ್ದರು. ನನಗೆ ತುಂಬಾ ಕಷ್ಟವಿದೆ ಎಂದು ಹೇಳಿ 5 ಕೋಟಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ. ಹಣ ನೀಡದೇ ಇದ್ದರೇ ಅನೈಸರ್ಗಿಕ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರು ನೀಡಿದ್ದಾರೆ ಎನ್ನಲಾಗಿದೆ.
ಇನ್ನೂ ಶನಿವಾರ ತಡರಾತ್ರಿಯೇ ಸಂತ್ರಸ್ತನನ್ನು ಹಾಸನದಿಂದ ಬೌರಿಂಗ್ ಆಸ್ಪತ್ರೆಗೆ ಕರೆತರಲಾಗಿದೆ. ಸಂತ್ರಸ್ತನಿಗೆ ವೈದ್ಯಕೀಯ ಪರೀಕ್ಷೆ ನಡೆಸಲು ಪೊಲೀಸರು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹಾಸನದಲ್ಲಿ ವೈದ್ಯಕೀಯ ಪರೀಕ್ಷೆಗೆ ಸಂತ್ರಸ್ತ ನಿರಾಕರಿಸಿದ್ದು, ಈ ಕಾರಣದಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.