ಭಾರತದ ಶ್ರೀಮಂತ ಉದ್ಯಮಿ ಮತ್ತು ಅತ್ಯಂತ ಗೌರವಾನ್ವಿತ ವ್ಯಕ್ತಿ, ಟಾಟಾ ಸನ್ಸ್ ಗೌರವಾಧ್ಯಕ್ಷ ರತನ್ ನಾವಲ್ ಟಾಟಾ (86) (Ratan Tata) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ಜೀವ ಚಿಕಿತ್ಸೆಗಾಗಿ ಮೊನ್ನೆಯಷ್ಟೇ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮತ್ತೆ ಅವರ ಅನಾರೋಗ್ಯ ಉಲ್ಬಣಿಸಿದಾಗ ಆಸ್ಪತ್ರೆಗೆ ಸೇರಿಸಲಾಗಿತ್ತು. ಬುಧವಾರ ರಾತ್ರಿ ರತನ್ ಟಾಟಾ (Ratan Tata) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ನಾಯಕರುಗಳು, ಉದ್ಯಮಿಗಳು ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
ರತನ್ ಟಾಟಾ (Ratan Tata)ರವರು ಬೊಂಬಾಯಿನಲ್ಲಿ 1937ರಲ್ಲಿ ಶ್ರೀಮತಿ ಸೂನಿ ಮತ್ತು ನಾವಲ್ ಹರ್ಮುಸ್ ಜಿ ಟಾಟಾ ದಂಪತಿಯ ಹಿರಿಯ ಮಗನಾಗಿ ಜನಿಸಿದರು. ರತನ್ ಟಾಟಾ ಅವರಿಗೆ ಭಾರತ ಸರ್ಕಾರವು 2008 ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿತು. ಅವಿವಾಹಿತ ರತನ್ ಟಾಟಾ ಅವರು ಅಪರೂಪದ ಉದ್ಯಮಿಯಾಗಿ ಬೆಳೆದು ದೇಶದ ಕೈಗಾರಿಕಾ ಕ್ಷೇತ್ರದಲ್ಲಿ ದಂತಕತೆಯಾಗಿದ್ದರು. ರತನ್ ನಾವಲ್ ಟಾಟಾ (Ratan Tata) (ಡಿಸೆಂಬರ್ 28, 1937)ಅನೇಕ ಪ್ರಮುಖ ಟಾಟಾ ಉದ್ಯಮಗಳಾದ ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ (Ratan Tata) ಟೆಲಿ ಸರ್ವಿಸಸ್ ಮುಂತಾದ ಕಂಪನಿಗಳನ್ನು ಸ್ಥಾಪಿಸಿದ್ದರು. ವ್ಯಾಪಾರದಲ್ಲಿ ಮಾತ್ರವಲ್ಲದೆ ಸಮಾಜ ಸೇವೆ, ಪರೋಪಕಾರಿಯಲ್ಲೂ ರತನ್ ಟಾಟಾ ಅವರಿಗೆ ಸರಿಸಾಟಿ ಯಾರೂ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಹಳ ದಾನ ಧರ್ಮ ಉದಾರಗಳ ರತನ್ ಟಾಟಾ (Ratan Tata) ನಿಜಕ್ಕೂ ಉದಾತ್ತ ವ್ಯಕ್ತಿಯಾಗಿದ್ದರು.
ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಅವರ ಅಂತ್ಯಕ್ರಿಯೆಯನ್ನು (Funeral) ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಹೇಳಿದ್ದಾರೆ. ರತನ್ ಟಾಟಾ ಅವರ ನಿಧನದ ಕುರಿತು ಏಕನಾಥ್ ಶಿಂಧೆ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದ್ದು, ಟಾಟಾ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಇಂದು ಅ.10 (ಗುರುವಾರ) ಮಹಾರಾಷ್ಟ್ರದಲ್ಲಿ ಶೋಕಾಚರಣೆ ಮಾಡಲಾಗುತ್ತದೆ. ಗೌರವ ಸೂಚಕವಾಗಿ ಮಹಾರಾಷ್ಟ್ರದ ಸರ್ಕಾರಿ ಕಚೇರಿಗಳಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು. ಇಂದಿನ ಮನರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.