Viral Video – ಕೆಲವು ದಿನಗಳ ಹಿಂದೆ ಕರ್ನಾಟಕದ ರಾಯಚೂರು ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನಡೆದ ಈ ವಿಚಿತ್ರ ಘಟನೆ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ರಭಸವಾಗಿ ಹರಿಯುವ ನದಿಯ ಮಧ್ಯೆ ಬಂಡೆಯ ಮೇಲೆ ಕುಳಿತಿದ್ದ ಯುವಕ “ಅವಳು ತಳ್ಳಿಬಿಟ್ಟಳು ಬ್ರೋ, ಅವಳನ್ನ ಹಿಡಿರಿ!” ಎಂದು ಕೂಗುತ್ತಿದ್ದ ದೃಶ್ಯ ಎಲ್ಲೆಡೆ ಹರಿದಾಡಿತ್ತು. “ನಂಬಿಕೆ ದ್ರೋಹ ಬ್ರೋ” ಎಂದು ಆತ ಆಡುವ ಮಾತುಗಳು ಇನ್ನಷ್ಟು ಕುತೂಹಲ ಮೂಡಿಸಿದ್ದವು.
ಈ ವಿಡಿಯೋದಲ್ಲಿ ಗಂಡನನ್ನು ನದಿಗೆ ತಳ್ಳಿದ ಆರೋಪಕ್ಕೆ ಗುರಿಯಾಗಿದ್ದ ಮಹಿಳೆ, ಈಗ ಆ ದಿನ ನಡೆದಿದ್ದೇನು ಎಂಬುದನ್ನು ವಿವರಿಸಿದ್ದಾರೆ. ಹಾಗಾದರೆ, ಆ ಸೇತುವೆ ಮೇಲೆ ನಿಜಕ್ಕೂ ಏನಾಯಿತು? ಗಂಡನನ್ನು ಹೆಂಡತಿಯೇ ತಳ್ಳಿದಳೇ? ಈ ವಿಚಿತ್ರ ಕೌಟುಂಬಿಕ ಪ್ರಕರಣದ ಅಸಲಿ ಸತ್ಯ ಇಲ್ಲಿದೆ.
Viral Video – ವೈರಲ್ ವಿಡಿಯೋದ ಹಿಂದಿನ ಕಥೆ ಏನು?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋ, ಗದ್ದೆಮ್ಮ ಎಂಬ ಪತ್ನಿ ತನ್ನ ಪತಿ ತಾತಪ್ಪನನ್ನು ನದಿಗೆ ತಳ್ಳಿದ್ದಾಳೆ ಎಂಬ ಸುದ್ದಿಗೆ ಕಾರಣವಾಗಿತ್ತು. ಮದುವೆಯಾಗಿ ಕೇವಲ ಮೂರು ತಿಂಗಳಲ್ಲೇ ಈ ಘಟನೆ ನಡೆದಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಸದ್ಯ, ಈ ಬಗ್ಗೆ ಯಾವುದೇ ಪೊಲೀಸ್ ಕೇಸ್ ದಾಖಲಾಗಿಲ್ಲವಾದ್ದರಿಂದ, ಪೊಲೀಸರು ಸಹಾಯ ಮಾಡಲು ಅಸಹಾಯಕರು ಎಂದು ಹೇಳಿದ್ದಾರೆ. ಕುಟುಂಬಗಳ ಮಧ್ಯೆ ರಾಜಿ ಪಂಚಾಯಿತಿ ನಡೆದರೂ, ಪತಿ ಮಾತ್ರ ವಿಚ್ಛೇದನಕ್ಕೆ ಪಟ್ಟು ಹಿಡಿದಿದ್ದಾನೆ. ಒಂದು ವೇಳೆ ವಿಚ್ಛೇದನ ನೀಡದಿದ್ದರೆ, ಪತ್ನಿಯ ಕುಟುಂಬದ ವಿರುದ್ಧ ಕೊಲೆ ಯತ್ನದ ಆರೋಪ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಮೂಲಕ ಕೇವಲ ಮೂರು ತಿಂಗಳಲ್ಲೇ ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ಮುಂದಾಗಿದ್ದಾರೆ.
Viral Video – “ನಾನೇಕೆ ಅವರನ್ನು ತಳ್ಳಲಿ? ಅವರೇ ಕಾಲು ಜಾರಿ ಬಿದ್ದಿದ್ದಾರೆ” – ಪತ್ನಿ ಸ್ಪಷ್ಟನೆ
ಈ ಆರೋಪಗಳ ನಡುವೆ, ಪತ್ನಿ ಗದ್ದೆಮ್ಮ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. “ನಾನೇಕೆ ಅವರನ್ನು ನದಿಗೆ ತಳ್ಳಲಿ? ಅವರೇ ಫೋಟೋ ತೆಗೆಯುವಾಗ ಕಾಲು ಜಾರಿ ಬಿದ್ದಿದ್ದಾರೆ. ವಿಡಿಯೋ ಮತ್ತು ಫೋಟೋಗಳನ್ನು ನೋಡಿದರೆ ಇದು ನಿಮಗೆ ಅರ್ಥವಾಗುತ್ತದೆ. ನಾನು ಎಷ್ಟೇ ಹೇಳಿದರೂ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆದಿದೆ” ಎಂದು ಅವರು ನೋವಿನಿಂದ ಹೇಳಿದ್ದಾರೆ. ಗದ್ದೆಮ್ಮ ಅವರ ತಾಯಿ ಕೂಡ, “ನಾವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಗಳನ್ನು ಗಂಡನ ಮನೆಗೆ ಕಳುಹಿಸಿದ್ದರೆ, ಕೇವಲ ಮೂರು ತಿಂಗಳಲ್ಲಿ ವಾಪಸ್ ಬಂದಿದ್ದಾಳೆ. ಮುಂದೆ ಏನು ಬರುತ್ತದೆಯೋ, ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ” ಎಂದು ಹೇಳಿದ್ದಾರೆ.
Viral Video – ಅಂದು ಸೇತುವೆ ಮೇಲೆ ನಡೆದಿದ್ದೇನು? – ಗದ್ದೆಮ್ಮ ಹೇಳಿಕೆ
ಗದ್ದೆಮ್ಮ ಅವರ ಪ್ರಕಾರ, ಏಪ್ರಿಲ್ 18 ರಂದು ಅವರ ಮದುವೆಯಾಗಿದ್ದು, ಈಗ ಮೂರು ತಿಂಗಳಾಗಿದೆ. ಸುರಪುರದಿಂದ ಶಕ್ತಿನಗರಕ್ಕೆ ಬೈಕ್‌ನಲ್ಲಿ ಹೊರಟಾಗ, ಸೇತುವೆ ಬಳಿ ಫೋಟೋ ತೆಗೆಸಿಕೊಳ್ಳಲು ನಿಂತಿದ್ದಾರೆ. “ನಾವು ಫೋಟೋ ತೆಗೆದುಕೊಂಡೆವು. ನಾನು ಅವರನ್ನು ತಳ್ಳಿಲ್ಲ, ಅವರು ಕಾಲು ಜಾರಿ ಬಿದ್ದಿದ್ದಾರೆ. ಆನಂತರ ನನ್ನ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ. ಬಿದ್ದ ನಂತರ ಅವರು ಈಜಿಕೊಂಡು ಹೋಗಿ ನದಿಯ ಮಧ್ಯೆ ಇದ್ದ ಬಂಡೆಯ ಮೇಲೆ ಕುಳಿತರು. ಅಲ್ಲಿ ನೀರು ಅಷ್ಟೇನೂ ಆಳವಿರಲಿಲ್ಲ. ಈಗ ಅವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ” ಎಂದು ಗದ್ದೆಮ್ಮ ವಿವರಿಸಿದ್ದಾರೆ.
ಅವರ ಪ್ರಕಾರ, ಈ ಮೊದಲು ಅವರಿಬ್ಬರ ನಡುವೆ ಯಾವುದೇ ಜಗಳ ಆಗಿರಲಿಲ್ಲ. “ಈಗ ಏಕೆ ಹೀಗೆ ಮಾಡುತ್ತಿದ್ದಾರೆಂದು ನನಗೆ ಗೊತ್ತಿಲ್ಲ. ನೀರಿನಿಂದ ಅವರನ್ನು ರಕ್ಷಿಸಿದ ನಂತರ, ನಾನು ಅವರ ಬೈಕ್‌ನಲ್ಲಿ ಹೋಗಲು ಮುಂದಾದರೂ, ಅವರು ನನ್ನನ್ನು ಹತ್ತಿಸಿಕೊಳ್ಳಲಿಲ್ಲ. ಅಲ್ಲಿದ್ದ ಇಬ್ಬರು ವ್ಯಕ್ತಿಗಳು ನನ್ನನ್ನು ಗಂಡನ ಮನೆಗೆ ಬಿಟ್ಟು ಬಂದರು. ಅವರೆಲ್ಲ ಹೋದ ನಂತರ, ‘ನೀನೇ ನನ್ನನ್ನು ನದಿಗೆ ತಳ್ಳಿದ್ದು’ ಎಂದು ಗಲಾಟೆ ಮಾಡಿ, ಮತ್ತೆ ನನ್ನ ತವರು ಮನೆಗೆ ತಂದು ಬಿಟ್ಟರು” ಎಂದು ಗದ್ದೆಮ್ಮ ಹೇಳಿದ್ದಾರೆ.
Read this also : Raichur : ರಾಯಚೂರು ನದಿಯಲ್ಲಿ ಭಯಾನಕ ಘಟನೆ: ಫೋಟೋ ನೆಪದಲ್ಲಿ ಪತಿಯನ್ನು ತಳ್ಳಿದಳೇ ಪತ್ನಿ?
ಇನ್ನು, ಇವರಿಬ್ಬರು ಸಂಬಂಧಿಗಳಾಗಿದ್ದು, ತಾತಪ್ಪ ಗದ್ದೆಮ್ಮ ಅವರ ಅತ್ತೆ ಮಗ. “ನಾನು 8ನೇ ತರಗತಿ ಓದಿದ್ದೇನೆ. ಅವರು ನನ್ನ ಅತ್ತೆ ಮಗನಾಗಿದ್ದರಿಂದಲೇ ಮದುವೆ nuಮಾಡಿ ಕೊಟ್ಟಿದ್ದರು. ಈಗ ಅವರು ನನಗೆ ಬೇಡ ಎನ್ನುತ್ತಿದ್ದಾರೆ” ಎಂದು ಗದ್ದೆಮ್ಮ ಅಳಲು ತೋಡಿಕೊಂಡಿದ್ದಾರೆ.