ಹತ್ತು ತಿಂಗಳು ಹೊತ್ತು, ಹೆತ್ತು, ಸಲಹಿದ ಆ ತಾಯಿ ಮಗನ ಏಳಿಗೆಯನ್ನೇ ಬಯಸಿದ್ದಳು. ಆದರೆ, ಅದೇ ಮಗ ಇಂದು ಹಣದ ವ್ಯಾಮೋಹಕ್ಕೆ ಬಿದ್ದು ರಕ್ಕಸನಾಗಿ ಬದಲಾಗಿದ್ದಾನೆ. ಕುಡಿತದ ಅಮಲು ಮತ್ತು ಹಣದ ಹಪಾಹಪಿಗೆ ಬಿದ್ದ ಮಗನೊಬ್ಬ ತನ್ನನ್ನು ಹೆತ್ತ ತಾಯಿಯನ್ನೇ ಅಟ್ಟಾಡಿಸಿ, ಕಲ್ಲೆತ್ತಿ ಹಾಕಿ ಕೊಲೆ ಮಾಡಿದ ಹೃದಯವಿದ್ರಾವಕ ಘಟನೆ ರಾಯಚೂರಿನ ಲಿಂಗಸುಗೂರು ತಾಲೂಕಿನಲ್ಲಿ ನಡೆದಿದೆ. ಮನುಷ್ಯತ್ವ ಮರೆತ ಮಗನ (Raichur Crime) ಈ ಕ್ರೌರ್ಯ ಇಡೀ ನಾಡನ್ನೇ ಬೆಚ್ಚಿಬೀಳಿಸಿದೆ.

Raichur Crime – ಜಕ್ಕೇರು ತಾಂಡಾದಲ್ಲಿ ನಡೆದಿದ್ದೇನು?
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಜಕ್ಕೇರು ತಾಂಡಾ ಈ ಭೀಕರ ಘಟನೆಗೆ ಸಾಕ್ಷಿಯಾಗಿದೆ. ಚಂದವ್ವ (45) ಎಂಬುವವರೇ ಮಗನ ಕೈಯಲ್ಲೇ ಪ್ರಾಣಬಿಟ್ಟ ದುರ್ದೈವಿ. ಇವರ ಮೊದಲ ಪುತ್ರ ಕುಮಾರ್ ಎಂಬಾತನೇ ಈ ಕೃತ್ಯ ಎಸಗಿದ ಹಂತಕ. ಬೆಂಗಳೂರಿನಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ನೆಲೆಸಿದ್ದ ಕುಮಾರ್, ಇತ್ತೀಚೆಗಷ್ಟೇ ಗ್ರಾಮಕ್ಕೆ ಬಂದಿದ್ದ. ಕುಡಿತದ ವ್ಯಸನಿಯಾಗಿದ್ದ ಈತ, ಸಣ್ಣಪುಟ್ಟ ವಿಚಾರಕ್ಕೂ ಮನೆಯಲ್ಲಿ ಕಿರಿಕ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಕೊಲೆಗೆ ಕಾರಣವಾದ ಆ ‘2 ಲಕ್ಷ’ ರೂಪಾಯಿ!
ಮಗನಿಂದಲೇ ತಾಯಿ ಕೊಲೆಯಾಗಲು ಕಾರಣ ಕೇಳಿದರೆ ಎಂತವರಿಗೂ ಪಿತ್ತ ನೆತ್ತಿಗೇರುತ್ತದೆ. ಕುಮಾರ್ ತನ್ನ ತಾಯಿಯ ಬಳಿ 2 ಲಕ್ಷ ರೂಪಾಯಿ ಹಣ ನೀಡುವಂತೆ ಪೀಡಿಸುತ್ತಿದ್ದ. ಹಣ ಇಲ್ಲದಿದ್ದರೆ ಜಮೀನು ಮಾರಿಯಾದರೂ ನನಗೆ ಹಣ ಕೊಡು ಎಂದು ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ನಿನ್ನೆಯಷ್ಟೇ ಹಣ ನೀಡಲು ಅಂತಿಮ ಗಡುವು ಕೂಡ ನೀಡಿದ್ದ ಈತ, ತಾಯಿ ಹಣ ಕೊಡಲು ನಿರಾಕರಿಸಿದಾಗ ಮನೆಯ ಮಾಳಿಗೆಯ ಶೀಟ್ ಒಡೆದು ಹಾಕಿ ರಂಪಾಟ ಮಾಡಿದ್ದ. ತಾಯಿ ಚಂದವ್ವ, “ನಿನ್ನ ತಮ್ಮ ಸಂತೋಷ್ ಮದುವೆ ಮಾಡಬೇಕಿದೆ, ಹಣ ಎಲ್ಲಿಂದ ತರಲಿ?” ಎಂದು ಬುದ್ಧಿವಾದ ಹೇಳಿದ್ದೇ ಆಕೆಯ ಪಾಲಿಗೆ ಮೃತ್ಯುವಾಗಿ ಪರಿಣಮಿಸಿತು. Read this also : ಬೆಂಗಳೂರಿನಲ್ಲಿ ಯುವತಿಗೆ ಬೆತ್ತಲೆ ವ್ಯಕ್ತಿಯಿಂದ ಕಿರುಕುಳ; ‘ಯಾರೂ ಸಹಾಯಕ್ಕೆ ಬರಲಿಲ್ಲ’ ಎಂದು ಕಣ್ಣೀರಿಟ್ಟ ಮಹಿಳೆ!
ನಡುರಸ್ತೆಯಲ್ಲೇ ನಡೆದ ಭೀಕರ ಕೃತ್ಯ
ಹಣದ ವಿಚಾರಕ್ಕೆ ಜಗಳ (Raichur Crime) ವಿಕೋಪಕ್ಕೆ ಹೋದಾಗ ತಾಯಿಯನ್ನು ರಸ್ತೆಯಲ್ಲೇ ಎಳೆದಾಡಿದ ಕುಮಾರ್, ಕೂದಲು ಹಿಡಿದು ಎಳೆದುಕೊಂಡು ಹೋಗಿ ಸೇವಾಲಾಲ್ ಭವನದ ಕಟ್ಟಡದ ಬಳಿ ಬಿಸಾಡಿದ್ದಾನೆ. ಈ ವೇಳೆ ತಾಯಿ ತಲೆಗೆ ಗಂಭೀರ ಪೆಟ್ಟಾಗಿ ಕೆಳಗೆ ಕುಸಿದಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಈ ಪಾಪಿ ಮಗ, ದೊಡ್ಡ ಕಲ್ಲನ್ನು ತಾಯಿಯ ತಲೆ ಮೇಲೆ ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಘೋರ ದೃಶ್ಯವನ್ನು ತಡೆಯಲು ಬಂದ ಗ್ರಾಮಸ್ಥರಿಗೂ “ನಿಮ್ಮನ್ನೂ ಮುಗಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದು ಆತನ ರಾಕ್ಷಸೀ ಪ್ರವೃತ್ತಿಗೆ ಹಿಡಿದ ಕೈಗನ್ನಡಿಯಾಗಿದೆ.

ಪೊಲೀಸ್ ವಶದಲ್ಲಿ ಆರೋಪಿ
ಘಟನೆಯ ನಂತರ (Raichur Crime) ಸ್ಥಳಕ್ಕೆ ಆಗಮಿಸಿದ ಮುದಗಲ್ ಪೊಲೀಸರು ಆರೋಪಿ ಕುಮಾರ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮೃತ ಚಂದವ್ವ ಅವರಿಗೆ ಒಟ್ಟು ಆರು ಜನ ಮಕ್ಕಳಿದ್ದು, ಇಡೀ ಕುಟುಂಬವೀಗ ಕಣ್ಣೀರಲ್ಲಿ ಮುಳುಗಿದೆ. ಹೆತ್ತ ತಾಯಿಯನ್ನೇ ಕೊಂದ ಈ ರಾಕ್ಷಸನಿಗೆ ತಕ್ಕ ಶಿಕ್ಷೆಯಾಗಲಿ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಹಣದ ವ್ಯಾಮೋಹಕ್ಕೆ ಬಿದ್ದು ಹೆತ್ತ ತಾಯಿಯನ್ನೇ ಬಲಿಪಡೆದ ಈ ಘಟನೆ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
