ಗುಡಿಬಂಡೆ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಕಟ ಮಸಣ ಕಾರ್ಮಿಕ ಮತ್ತು ತಮಟೆ, ವಾದ್ಯ ಕಲಾವಿದರ ಸಂಘಗಳ ನೇತೃತ್ವದಲ್ಲಿ ತಾಲೂಕಿನ ಹಂಪಸಂದ್ರ ಗ್ರಾ.ಪಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಸಂಚಾಲಕ ಕೆ.ಮುನಿಯಪ್ಪ, ಸ್ಮಶಾನಗಳಲ್ಲಿ ಮೃತರ ಶವ ಸಂಸ್ಕಾರ ಮಾಡಲು ಪ್ರತಿ ಗ್ರಾಮದಲ್ಲೂ ಮಸಣ ಕಾರ್ಮಿಕರಿದ್ದಾರೆ. ಆದರೆ ಅವರು ಒಂದು ಸೇವೆಯಾಗಿ ಕೆಲಸ ಮಾಡುತ್ತಿದ್ದು, ಸರಕಾರದಿಂದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಹಾಗಾಗಿ ನಿವೇಶನ, ವಸತಿ ರಹಿತ ಕಾರ್ಮಿಕರನ್ನು ಗುರುತಿಸಿ ಸೌಲಭ್ಯಗಳನ್ನು ಒದಗಿಸಬೇಕು. ಮಸಣ ಕಾರ್ಮಿಕರು ಸಮಾಧಿಗಾಗಿ ಗುಣಿಗಳನ್ನು ಹಗೆಯಬೇಕಾದರೆ ಕಲ್ಲು, ಮುಳ್ಳುಗಳನ್ನು ಲೆಕ್ಕಿಸದೆ ಕೆಲಸ ಮಾಡಬೇಕು. ಒಂದೊಂದು ವೇಳೆ ಸ್ಮಶಾನಗಳಲ್ಲಿ ಮೃತ ದೇಹಗಳ ವಾಸನೆ, ರೋಗರುಜನಗಳು ಹರಡುವ ಭೀತಿ ಎದುರಿಸುತ್ತಾರೆ. ಅಷ್ಟೇ ಅಲ್ಲದೆ ಒಮ್ಮೊಮ್ಮೆ ಗಾಯಗಳಾಗುತ್ತವೆ. ಇಂತಹ ಅನಾಹುತಗಳಿಂದ ಭದ್ರತೆ ಇಲ್ಲವಾಗಿದೆ. ಹಾಗಾಗಿ ಸರಕಾರ ಗ್ರಾಮ ಪಂಚಾಯತಿಗಳ ಮೂಲಕ ಮಸಣ ಕಾರ್ಮಿಕರಿಗೆ ಆರೋಗ್ಯ ಭದ್ರತೆ ಒದಗಿಸಿ, ಪಿಪಿಇ ಕಿಟ್‌ಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ಪ್ರತಿಭಟನಾ ಸ್ಥಳಕ್ಕೆ ಪಿಡಿಒ ಶ್ರೀನಿವಾಸ್ ರವರು ಆಗಮಿಸಿ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಅವರು ನಮ್ಮ ಗ್ರಾಪಂ ವ್ಯಾಪ್ತಿಗೆ ಬರುವಂತಹ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆಯನ್ನು ನೀಡಿದ ಬಳಿಕ ಪ್ರತಿಭಟನೆಯನ್ನು ನಿಲ್ಲಿಸಿ ಪ್ರತಿಭಟನಾಕಾರರು ವಾಪಸ್ ನಡೆದರು. ಈ ವೇಳೆ ಕರ್ನಾಟಕ ಮಸಣ ಕಾರ್ಮಿಕ ಸಂಘಟನೆ ಹಂಪಸಂದ್ರ ಗ್ರಾಮ ಪಂಚಾಯಿತಿ ಸಮಿತಿ ಅಧ್ಯಕ್ಷ ಆದಿನಾರಾಯಣಪ್ಪ , ಉಪಾಧ್ಯಕ್ಷರಾದ ರಾಮಾಂಜಿನಪ್ಪ , ಗಂಗಾಧರ, ಶ್ರೀರಾಮಪ್ಪ , ಕಾರ್ಯದರ್ಶಿ ಎಲ್ ಆದಿನಾರಾಯಣಪ್ಪ, ಕೃಷ್ಣಪ್ಪ , ಅಶ್ವತ್ಥಪ್ಪ ಸೇರಿದಂತೆ ಹಲವರಿದ್ದರು.