ಬಾಗೇಪಲ್ಲಿ: ಪಟ್ಟಣದಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ಜನರ ಅನುಕೂಲಕ್ಕಾಗಿ ಮತ್ತೇ ಪ್ರತಿ ಸೋಮವಾರ ಸಂತೆಯನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಹಾಗೂ ಸಂತೆ ಮೈಧಾನ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ಕರವೇ ಸಂಘಟನೆಗಳ ಒಕ್ಕೂಟಗಳ ಕಾರ್ಯಕರ್ತರು ಮಂಗಳವಾರ ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ನರಸಿಂಹ ನಾಯ್ಡು, ಪಟ್ಟಣದ ಪುರಸಭೆಗೆ ಸೇರಿದ ಜಾಗದಲ್ಲಿ ಪ್ರತಿ ಸೋಮವಾರ ವಾರದ ಸಂತೆ ನಡೆಯುತ್ತಿತ್ತು ಆದರೆ ಕೋವಿಡ್ ಹಿನ್ನಲೆಯಲ್ಲಿ ವಾರದ ಸಂತೆಯನ್ನು ನಿಲ್ಲಿಸಲಾಗಿತ್ತು.ಇದರಿಂದ ವ್ಯಾಪಾರಿಗಳು ಸೇರಿದಂತೆ ಬಡವರಿಗೆ ತೊಂದರೆಯಾಗಿದೆ. ಪಟ್ಟಣ ಸೇರಿದಂತೆ ಪಟ್ಟಣದ ಸುತ್ತಮುತ್ತಲಿನ ಜನರು ವಾರದ ಸಂತೆಯಲ್ಲಿ ತರಕಾರಿ ಸೇರಿದಂತೆ ಅಗತ್ಯವಿರುವ ದಿನಸಿ ಸರಕುಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸುತ್ತಿದ್ದರು ರೈತರು, ಸಣ್ಣ ವ್ಯಾಪಾರಸ್ಥರು, ಕೂಲಿಕಾರ್ಮಿಕರಿಗೆ ಅನುಕೂಲವಾಗುತ್ತಿತ್ತು. ವಾರದ ಸಂತೆ ನಿಲ್ಲಿಸಿದ ಪರಿಣಾಮ ಅಂಗಡಿಗಳಲ್ಲಿ ದುಭಾರಿ ಬೆಲೆ ನೀಡಿ ಖರೀದಿಸುವಂತಹ ಪರಿಸ್ಥಿತಿ ಇದೆ. ಇದರಿಂದ ಜನರ ಮತ್ತು ಸಣ್ಣ ವ್ಯಾಪಾರಿಗಳ ಅನುಕೂಲಕ್ಕಾಗಿ ಪ್ರತಿ ಸೋಮವಾರ ವಾರದ ಸಂತೆಯನ್ನು ಮತ್ತೇ ಪ್ರಾರಂಭಿಸುವಂತೆ ಪುರಸಭೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಕನ್ನಡ ಸೇನೆ ಬಾಬಾಜಾನ್ ಮಾತನಾಡಿ, ವಾರದ ಸಂತೆಯಲ್ಲಿ ಜನಸಾಮಾನ್ಯರಿಗೆ ತರಕಾರಿ, ದಿನಸಿ ಸೇರಿದಂತೆ ಅಗತ್ಯವಿರುವ ಸರಕು ಸಾಮಗ್ರಿಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದ್ದರಿಂದ ಬಡವರು ಕೂಲಿ ಕಾರ್ಮಿಕರಿಗೆ ತುಂಬಾ ಅನುಕೂಲವಾಗುತ್ತಿತ್ತು ಇದರಿಂದ ಮತ್ತೇ ವಾರದ ಸಂತೆಯನ್ನು ಪ್ರತಿ ಸೋಮವಾರ ಪ್ರಾರಂಭಿಸುವಂತೆ ಒತ್ತಾಯಿಸಿದ ಅವರು ಪುರಸಭೆಗೆ ಸೇರಿದ ಸಂತೆ ಮೈದಾನದ ಜಾಗವನ್ನು ಕೆಲವು ಬಲಾಡ್ಯರು ಆಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ತಕ್ಷಣ ಪುರಸಭೆ ಅಧಿಕಾರಿಗಳು ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸುವಂತೆ ಹಾಗೂ ಸಂತೆ ಮೈದಾನದಲ್ಲಿ ಅಪೂರ್ಣಗೊಂಡಿರುವ ಇಂದಿರಾ ಕ್ಯಾಟೀನ್‍ಗೆ ಬಳಸಿರುವ ವಸ್ತುಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು.
ನಂತರ ಕರವೇ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಅ.ನಾ.ಮೂರ್ತಿ, ಕರವೇ ಮುಖಂಡರಾದ ರವೀಂದ್ರ, ಸೂರ್ಯನಾರಾಣರೆಡ್ಡಿ, ಬಿ.ಎನ್.ಸುರೇಶ್ ಬಾಬು, ಜಿ.ವಿ.ವೆಂಕಟೇಶ್, ಸಂಧೀಪ್, ರಿಯಾಜ್ ಬಾಷಾ, ನಾಗಿರೆಡ್ಡಿ, ಸುಬ್ಬನ್ನ, ಅಜಯ್ ಮತ್ತಿತರರು ಇದ್ದರು.