ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರ ನಿರ್ಮಲವಾಗಿಟ್ಟುಕೊಂಡರೆ ಮಾರಕ ರೋಗಗಳನ್ನು ತಡೆಗಟ್ಟಬಹುದು. ಪರಿಸರ ರಕ್ಷಣೆ ನಮ್ಮೆಲ್ಲರ ಜಬಾಬ್ದಾರಿ. ಪರಿಸರ ನಾಶ ಮಾಡಿದರೆ ಮುಂದಿನ ದಿನಗಳಲ್ಲಿ ಭೂಮಿಗೆ ಬಹಳಷ್ಟು ಹಾನಿಯಾಗಲಿದೆ ಎಂದು ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಧೀಶ ಕೆ. ಎಂ. ಹರೀಶ್ ತಿಳಿಸಿದರು.
ಗುಡಿಬಂಡೆ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ, ಪ್ರಾದೇಶಿಕ ಅರಣ್ಯ ವಲಯ ಹಾಗೂ ಸಾಮಾಜಿಕ ಅರಣ್ಯ ವಲಯ ಗುಡಿಬಂಡೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿಗಳನ್ನು ನೆಟ್ಟು ಮಾತನಾಡಿದ ಅವರು ಸಮಾಜ ಬೆಳೆದಂತೆಲ್ಲ ಪರಿಸರ ಕಾಳಜಿ ಮರೆಯಾಗುತ್ತಿದೆ. ಇದರಿಂದ ನಾವೆಲ್ಲ ವಿವಿಧ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದೇವೆ. ಪ್ರತಿಯೊಬ್ಬರೂ ಕನಿಷ್ಠ ಸುತ್ತಲಿನ ಪರಿಸರದಲ್ಲಿ ಗಿಡ ಮರ ಬೆಳೆಸುವುದರಿಂದ ಪರಿಸರ ಶುದ್ಧ ಹಾಗೂ ಸ್ವಚ್ಛವಾಗಿರುತ್ತದೆ. ಈ ಬಗ್ಗೆ ತಕ್ಷಣ ಜಾಗತರಾಗದಿದ್ದರೆ ಭವಿಷ್ಯದಲ್ಲಿ ಕೆಡಕು ಕಾದಿದೆ. ಪರಿಸರ ನಾಶದಿಂದಲೇ ಇಂದು ಪ್ರಕತಿಯಲ್ಲಿ ಏರು ಪೇರುಗಳಾಗಿವೆ. ಮುಂಬರುವ ದಿನಗಳಲ್ಲಿ ಜನರು ಹೆಚ್ಚೆಚ್ಚು ಗಿಡ ಬೆಳೆಸಿ ಪರಿಸರದಲ್ಲಿ ಸಮತೋಲನ ಕಾಯ್ದು ಕೊಂಡು ವಿಶ್ವವನ್ನು ರಕ್ಷಿಸಬೇಕಾಗಿದೆ ಎಂದು ಕರೆ ನೀಡಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ರಾಮನಾಥರೆಡ್ಡಿ ಮಾತನಾಡಿ ಸಕಾಲದಲ್ಲಿ ಮಳೆಯಾಗಲು ಗಿಡ ಮರಗಳು ಹಾಗೂ ಅರಣ್ಯ ಅವಶ್ಯಕತೆ ಇದೆ. ಕಾಲ ಕಾಲಕ್ಕೆ ಮಳೆ ಬಂದರೆ ರೈತರಿಗೆ, ಜನತೆಗೆ, ದನಕರುಗಳಿಗೆ ಅನುಕೂಲವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸಿಮೆಂಟ್ ಅರಣ್ಯಕ್ಕೆ ಮಾರು ಹೋಗಿ ನೈಜ ಅರಣ್ಯವನ್ನು ಹಾಳುಗೆಡುವುಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಅರಣ್ಯದ ವಲಯ ಅರಣ್ಯಾಧಿಕಾರಿ ಪೂರ್ಣಿಕ ರಾಣಿ, ನಮ್ಮ ಸುತ್ತಲಿನ ಪರಿಸರದಲ್ಲಿನ ಸಮತೋಲನ ಕಾಪಾಡಬೇಕಾದರೆ ಗಿಡಮರಗಳನ್ನು ನೆಟ್ಟು, ನೀರುಣಿಸಿ ಪೋಷಿಸಬೇಕಾದ ಕರ್ತವ್ಯ ಸಮಸ್ತ ನಾಗರಿಕರದ್ದಾಗಿದೆ. ಕಾಡನ್ನು, ಗಿಡಮರಗಳನ್ನು ನಾಶ ಮಾಡುವುದು ಕಾನೂನು ದೃಷ್ಟಿಯಲ್ಲಿ ಅಪರಾಧ ಹಾಗೆ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು, ಸಾರ್ವಜನಿಕರು ತಮ್ಮ ಸ್ವಂತ ಜಮೀನು, ಮನೆಯ ಅಂಗಳ ಹೀಗೆ ತಮಗೆ ಅನುಕೂಲವಾಗುವ ಕಡೆ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ನಂದೀಶ್ವರ ರೆಡ್ಡಿ, ಕಾರ್ಯದರ್ಶಿ ಸಿ.ವಿ.ಮಂಜುನಾಥ, ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ಚೇತನ್, ವಕೀಲರಾದ ನಾರಾಯಣಸ್ವಾಮಿ, ಬಾಬಾಜಾನ್, ಅಭಿಷೇಕ್, ನರೇಂದ್ರ, ಅಮರೇಶ, ನ್ಯಾಯಾಲಯದ ಶಿರಸ್ತೇದಾರ್ ನಟರಾಜ್ ಮತ್ತು ಸತೀಶ್, ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಕ್ಷಿದಾರರು ಹಾಗೂ ಸಾರ್ವಜನಿಕ ಹಾಜರಿದ್ದರು.