Child Marriage – ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಬಾಲ್ಯ ವಿವಾಹದಿಂದ ಅನೇಕ ದುಷ್ಪರಿಣಾಮಗಳು ಎದುರಾಗಿದ್ದು, ಈ ನೀಚ ಪದ್ದತಿಯನ್ನು ಸಮಾಜದಿಂದ ಕಿತ್ತೊಗೆಯಲು ಎಲ್ಲರೂ ಸಹಕಾರ ನೀಡುವುದರ ಜೊತೆಗೆ ಕೈಜೋಡಿಸಬೇಕೆಂದು ಆನೆಕಲ್ ಮೂಲದ ರೀಡ್ ಸೆಂಟರ್ ಸಂಸ್ಥೆಯ ಸಿಬ್ಬಂದಿ ಅಮರಾವತಿ ಮನವಿ ಮಾಡಿದರು.
Child Marriage – ಬಾಲ್ಯ ವಿವಾಹ ತಡೆಯುವುದು ಅತ್ಯಗತ್ಯ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಲವು ಗ್ರಾಮಗಳಲ್ಲಿ ಮಕ್ಕಳ ರಕ್ಷಣಾ ಘಟಕ, ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಹಾಗೂ ಆನೇಕಲ್ ನ ರೀಡ್ ಸೆಂಟರ್ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಾಲ್ಯ ವಿವಾಹದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಲ್ಯವಿವಾಹವು ಕೇವಲ ಕಾನೂನು ಉಲ್ಲಂಘನೆಯಲ್ಲ, ಬದಲಾಗಿ ಇದು ಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುವ ಮತ್ತು ಅವರ ಹಕ್ಕುಗಳನ್ನು ಉಲ್ಲಂಘಿಸುವ ಒಂದು ಗಂಭೀರ ಸಾಮಾಜಿಕ ಸಮಸ್ಯೆ. ಅಪ್ರಾಪ್ತ ವಯಸ್ಸಿನಲ್ಲಿ ನಡೆಯುವ ವಿವಾಹಗಳು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಈ ಹಿನ್ನೆಲೆಯಲ್ಲಿ, ಬಾಲ್ಯವಿವಾಹವನ್ನು ತಡೆಯುವುದು ಇಂದಿನ ತುರ್ತಿನ ಅವಶ್ಯಕತೆಯಾಗಿದೆ.
Child Marriage – ಬಾಲ್ಯ ವಿವಾಹಗಳ ಕುರಿತು ಮಾಹಿತಿ ನೀಡಿ
ಇನ್ನೂ ಈ ಸಂಬಂಧ ಎಲ್ಲಾ ಸಮುದಾಯಗಳ ಧರ್ಮಗುರುಗಳು, ಪಂಡಿತರು, ಮೌಲ್ವಿಗಳು, ಚರ್ಚ್ ಫಾದರ್ ಗಳಿಗೆ ಅರಿವು ಮೂಡಿಸಲಾಗಿದೆ. ಸಾಮಾನ್ಯವಾಗಿ ವಿವಾಹಗಳು ನಡೆಯಲು ಆಯಾ ಧರ್ಮಗಳು ಗುರುಗಳು ಅಥವಾ ಪುರೋಹಿತರು ಬೇಕಾಗುತ್ತದೆ. ಆದ್ದರಿಂದ ಈ ಧರ್ಮಗುರುಗಳು ಬಾಲ್ಯ ವಿವಾಹಗಳ ಬಗ್ಗೆ ಮಾಹಿತಿ ಸಿಕ್ಕರೇ ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತರುವಂತಹ ಕೆಲಸ ಮಾಡಬೇಕು. ಜೊತೆಗೆ ಪೋಷಕರಿಗೆ ಅಗತ್ಯ ಅರಿವು ಮೂಡಿಸಬೇಕು. ಈಗಾಗಲೇ ಎಲ್ಲಾ ದೇವಾಲಯಗಳು, ಚರ್ಚ್‌ಗಳು, ಮಸೀದಿಗಳ ಎದುರು ಬಾಲ್ಯ ವಿವಾಹಕ್ಕೆ ಅನುಮತಿ ಇಲ್ಲ ಎಂಬ ನಾಮಫಲಕಗಳನ್ನು ಸಹ ಹಾಕಲಾಗಿದೆ. ಈ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು. Read this also : Caste Census: ಕೇಂದ್ರ ಸರ್ಕಾರದ ದಿಟ್ಟ ಹೆಜ್ಜೆ: ಜನಗಣತಿಯೊಂದಿಗೆ ಜಾತಿಗಣತಿಗೂ ಸಮ್ಮತಿ ಸೂಚನೆ…!
Child Marriage – ಬಾಲ್ಯ ವಿವಾಹ ತಡೆಗೆ ಎಲ್ಲರ ಸಹಕಾರ ಅಗತ್ಯ
ಇನ್ನೂ ಈ ಅಭಿಯಾನದಡಿ ಕಳೆದೆರಡು ವರ್ಷಗಳಲ್ಲಿ ದೇಶದಾದ್ಯಂತ ಲಕ್ಷಾಂತರ ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಸುಮಾರು 5 ಕೋಟಿ ಮಂದಿಗೆ ಬಾಲ್ಯ ವಿವಾಹ ವಿರೋಧಿ ಪ್ರಮಾಣ ವಚನವನ್ನು ಬೋಧಿಸಲಾಗಿದೆ. ರೀಡ್ ಸೆಂಟರ್ ಸಂಸ್ಥೆಯ ವತಿಯಿಂದ ಕಳೆದ ವರ್ಷ 28 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಇತ್ತಿಚಿಗೆ ಪೋಕ್ಸೋ ಕಾಯ್ದೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು, ಬಹಳಷ್ಟು ಬಾಲ್ಯ ವಿವಾಹಗಳು ನಡೆಯುತ್ತಿಲ್ಲ. ಇದೇ ರೀತಿಯಾಗಿ ಎಲ್ಲರೂ ಸರ್ಕಾರ, ಇಲಾಖೆಗಳೊಂದಿಗೆ ಸಹಕಾರ ನೀಡಿದಾಗ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂದರು.
ಇನ್ನೂ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ಅಕ್ಷಯ ತೃತೀಯ ಅಂಗವಾಗಿ ಬಾಲ್ಯ ವಿವಾಹ ಮುಕ್ತ ಭಾರತ ಬಗ್ಗೆ ಧಾರ್ಮಿಖ ಮುಖಂಡರ ಸಭೆಯನ್ನು ನಡೆಸಲಾಯಿತು. ತಾಲೂಕಿನಾದ್ಯಂತ ವಿವಾಹ ಕಾಲದ ಹಿನ್ನೆಲೆಯಲ್ಲಿ ಬಾಲ್ಯವಿವಾಹ ತಡೆಯುವ ಉದ್ದೇಶದಿಂದ ವಿವಿಧ ಧರ್ಮಗಳ ಮದುವೆ ನೆರವೇರಿಸುವ ಪುರೋಹಿತರ ನಡುವೆ ಜಾಗೃತಿ ಅಭಿಯಾನವನ್ನು ನಡೆಸಲಾಗುತ್ತಿದೆ.