ಗುಡಿಬಂಡೆ: ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಬಾಗೇಪಲ್ಲಿ ಹೊರವಲಯದ ಸುಂಕಲಮ್ಮ ದೇವಾಲಯದ ಬಳಿಯಿರುವ ನರ್ಸರಿಯಲ್ಲಿ ಕಳಪೆ ಟೊಮೋಟಾ ನಾರು ವಿತರಣೆ ಮಾಡಲಾಗುತ್ತಿದೆ. ಅವರ ವಿರುದ್ದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕಾನೂನಿನಂತೆ ಕ್ರಮ ತೆಗೆದುಕೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.
ಪಟ್ಟಣದ ತೋಟಗಾರಿಕೆ ಇಲಾಖೆಯ ಮುಂದೆ ರೈತರು ಕಳಪೆ ಟೊಮೋಟಾ ಸಸಿಗಳಿಂದ ಬೆಳೆದ ಕಳಪೆ ಫಸಲನ್ನು ತಂದು ಹಾಕಿ ಆಕ್ರೋಷ ವ್ಯಕ್ತಪಡಿಸಿದರು. ಈ ವೇಳೆ ನಷ್ಟಹೋದ ರೈತ ಆದಿನಾರಾಯಣರೆಡ್ಡಿ ಮಾತನಾಡಿ, ಕೃಷಿಯಲ್ಲೇ ನಾವು ಜೀವನ ಸಾಗಿಸುತ್ತಿದ್ದೇವೆ. ಬರಗಾಲದಿಂದ ತುಂಬಾ ಸಂಕಷ್ಟದಲ್ಲಿ ಸಿಲುಕಿದ್ದೇವೆ. ಇರುವಂತಹ ಅಲ್ಪಸ್ವಲ್ಪ ನೀರನ್ನು ಬಳಸಿಕೊಂಡು ಹಂಪಸಂದ್ರ ಕೆರೆಯ ಕೆಳಗೆ ಒಂದೂವರೆ ಎಕರೆ ಪ್ರದೇಶದಲ್ಲಿ ಟೊಮೋಟಾ ಬೆಳೆಯನ್ನು ಇಟ್ಟಿದ್ದೇನೆ. ಬಾಗೇಪಲ್ಲಿ ಹೊರವಲಯದ ಸುಂಕಲಮ್ಮ ದೇವಸ್ಥಾನದ ಬಳಿಯಿರುವ ನರ್ಸರಿಯಿಂದ ನಾರು ಖರೀದಿಸಿದ್ದೆ. ನರ್ಸರಿ ಮಾಲೀಕ 8 ಸಾವಿರ ಟೊಮೋಟಾ ನಾರಿಗೆ 80ಪೈಸೆ ಹಣ ಪಡೆದಿದ್ದ. ಟೊಮೋಟಾ ಸಸಿಗಳು ಚೆನ್ನಾಗಿ ಬೆಳೆಯುತ್ತಿತ್ತು. ಅದನ್ನು ನೋಡಿ ನಾವು ಒಳ್ಳೆಯ ಫಸಲು ಬರುತ್ತದೆ ಎಂದು ಭಾವಿಸಿ, ಮಾಡಿದ ಸಾಲ ತೀರಿಸಬಹುದೆಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಫಸಲು ಬಂದ ಬಳಿಕ ನೋಡಿದರೇ ನಮಗೆ ನೀಡಿದ್ದು ಕಳಪೆ ಬಿತ್ತನೆ ನಾರು ಎಂದು ತಿಳಿದಿದೆ. ಟೊಮೋಟಾಗಳು ಗೋಲಿ ಮಾದರಿಯಲ್ಲಿವೆ. ತುಂಬಾ ನಷ್ಟವಾಗಿದೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಈ ಸಂಬಂಧಪಟ್ಟ ನರ್ಸರಿ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಬಳಿಕ ಚಲವಾದಿ ಸಂಘಟನೆ ಎಂ.ಸಿ.ಚಿಕ್ಕನಾರಾಯಣಪ್ಪ ಮಾತನಾಡಿ, ಇತ್ತೀಚಿಗೆ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬೇರೆ ಪ್ರದೇಶಗಳಿಂದ ಬಂದಂತಹವರು ನರ್ಸರಿಗಳನ್ನು ಹಾಕಿಕೊಂಡು ರೈತರಿಗೆ ಮೋಸ ಮಾಡುತ್ತಿದ್ದಾರೆ. ತೋಟಗಾರಿಕೆ ಇಲಾಖೆಯಿಂದಲೇ ಪರವಾನಿಗೆ ನೀಡುತ್ತಾರೆ. ಯಾವುದೇ ನರ್ಸರಿಯಲ್ಲಿ ಸಸಿಗಳನ್ನು ಖರೀದಿಸಿದರೇ ಬಿಲ್ ಕೊಡೊಲ್ಲ, ಬಿಲ್ ಕೇಳಿದರೇ ಬಿತ್ತನೆ ಸಸಿಗಳನ್ನು ಕೊಡಲ್ಲ. ರೈತನಿಗೆ ಖರದೀಸಲೇ ಬೇಕಾದ ಅನಿರ್ವಾಯತೆ ಇರುತ್ತದೆ. ಈ ನರ್ಸರಿಗಳಿಗೆ ಲೈಸೆನ್ಸ್ ಕೊಡುವಂತಹ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಬೇಕು. ಜೊತೆಗೆ ಇಲಾಖೆಯಿಂದಲೇ ನಮಗೆ ಟೊಮೋಟಾ ಬಿತ್ತನೆ ಪೈರುಗಳನ್ನು ವಿತರಣೆ ಮಾಡಬೇಕೆಂದು ಒತ್ತಾಯಿಸಿದರು.
ಬಳಿಕ ರೈತ ನುಲಿಗುಂಬ ರೈತ ಶಿವಶಂಕರರೆಡ್ಡಿ ತಾಲೂಕಿನ ಯಾವುದೇ ನರ್ಸರಿಯಲ್ಲಿ ರೈತರಿಗೆ ಬಿಲ್ ಕೊಡುತ್ತಿಲ್ಲ. ಈ ಕುರಿತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ರೈತರಿಗೆ ಅನುಕೂಲ ಮಾಡಲು ಇರುವಂತಹ ಅಧಿಕಾರಿಗಳಿಗೆ ನಿರ್ಲಕ್ಷ್ಯ ಇದ್ದರೇ ರೈತರಿಗೆ ಸಹಾಯ ಮಾಡುವವರಾದರೂ ಯಾರು ಎಂದು ಪ್ರಶ್ನೆ ಮಾಡಿದರು. ಸದ್ಯ ಇಲಾಖೆಯ ಅಧಿಕಾರಿಗಳು ಸಂಬಂಧಪಟ್ಟ ನರ್ಸರಿ ಮಾಲೀಕರಿಗೆ ನೊಟೀಸ್ ನೀಡಲು ಮುಂದಾಗಿದ್ದಾರೆ. ಇಲಾಖೆಯ ಮಾರ್ಗಸೂಚಿಯಂತೆ ಪ್ರಕ್ರಿಯೆಯನ್ನು ಮುಗಿಸಿ ನರ್ಸರಿ ಮಾಲೀಕರಿಂದ ಕಳಪೆ ಸಸಿಗಳು ವಿತರಣೆಯಾಗಿದ್ದರೇ ಅವರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಸಮಯದಲ್ಲಿ ತಾಲೂಕಿನ ರೈತರಾದ ಗಂಗಿರೆಡ್ಡಿ, ಗೋಪಾಲಪ್ಪ ಸೇರಿದಂತೆ ಹಲವರು ಇದ್ದರು.