ಲೋಕಸಭಾ ಚುನಾವಣೆ 2024 ಹಂತ ಹಂತಗಳಲ್ಲಿ ನಡೆಯುತ್ತಿದ್ದು, ಸದ್ಯ ದೇಶದಲ್ಲಿ ನಾಲ್ಕನೇ ಹಂತದ ಚುನಾವಣೆ ಮುಗಿದಿದೆ. ಸದ್ಯ ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಫರ್ಧೆ ಮಾಡುತ್ತಿದ್ದು, ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಚುನಾವಣೆ ಸಂಬಂಧ ಮೋದಿಯವರು ಸಲ್ಲಿಸಿದ ಅಫಿಡವಿಟ್ ನಲ್ಲಿ ತಮ್ಮ ಆಸ್ತಿ ಸೇರಿದಂತೆ ಇತರ ವಿವರಗಳನ್ನು ನಮೂದಿಸಿದ್ದು, ಅದರಂತೆ ಪ್ರಧಾನಿ ಮೋದಿ ಹೆಸರಲ್ಲಿ ಮನೆ ಅಥವಾ ಕಾರು ಇಲ್ಲ ಎಂದು ತಿಳಿಸಿದ್ದಾರೆ. ಅವರ ಬಳಿ ಒಟ್ಟು 3.02 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಣೆ ಮಾಡಿದ್ದಾರೆ.
ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ (ಮೇ.14) ರಂದು ನಾಮಪತ್ರ ಸಲ್ಲಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಕಾಲಭೈರವ ದೇವಾಲಯಕ್ಕೆ ಭೇಟಿ ನೀಡಿ ಬಳಿಕ ವಾರಣಾಸಿಯ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಹರ್ದೀಪ್ ಸಿಂಗ್ ಪುರಿ, ಅನುಪ್ರಿಯಾ ಪಟೇಲ್ ಮತ್ತು ರಾಮದಾಸ್ ಅಠಾವಳೆ ಸೇರಿದಂತೆ ಹಲವು ಮುಖ್ಯಮಂತ್ರಿಗಳು ಮತ್ತು ಆಡಳಿತ ಪಕ್ಷ ಮತ್ತು ಎನ್‌ಡಿಎ ಘಟಕಗಳ ನಾಯಕರು ಮೋದಿಯವರ ಜೊತೆಗಿದ್ದರು. ಆದರೆ ಬಿಹಾರ ಸಿಎಂ ನಿತೀಶ್ ಕುಮಾರ್ ಅನಾರೋಗ್ಯದ ನಿಮಿತ್ತ ಈ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ ಎನ್ನಲಾಗಿದೆ.
ಇನ್ನೂ ಚುನಾವಣೆಯ ನಿಮಿತ್ತ ನೀಡುವಂತಹ ಅಫಿಡಿವೇಟ್ ನಲ್ಲಿ ಮೋದಿಯವರು ತಮ್ಮ ಬಳಿ ಇರುವ ನಗದು ಹಣ 52,920 ರೂ., ಗಾಂಧಿನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 73,304 ರೂ., ವಾರಾಣಸಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 7,000 ರೂ., ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2,85,60,338 ರೂ. ಠೇವಣಿ, NSC ಸ್ಕ್ರೀಂ ಅಡಿಯಲ್ಲಿ 9,12,398 ರೂ. ಹೂಡಿಕೆ, 2 ಲಕ್ಷ 67 ಸಾವಿರದ 750 ರೂ. 4 ಗೋಲ್ಡ್ ರಿಂಗ್ ಹೊಂದಿದ್ದಾರೆ. ಅವರ ಬಳಿ ಕಾರ್ ಆಗಲಿ ಅಥವಾ ಮನೆಯಾಗಲಿ ಇಲ್ಲ. ಇನ್ನೂ 1967 ರಲ್ಲಿ ಗುಜರಾತ್ ಬೋರ್ಡ್‌ನಿಂದ ಎಸ್,ಎಸ್,ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 1978 ರಲ್ಲಿ ದೆಹಲಿ ಯೂನಿವರ್ಸಿಟಿಯಿಂದ ಕಲೆ ಹಾಗೂ 1983 ರಲ್ಲಿ ಗುಜರಾತ್ ಯೂನಿವರ್ಸಿಟಿಯಿಂದ ಮಾಸ್ಟರ್ ಆಫ್ ಆರ್ಟ್ಸ್ ನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಅವರ ವಿರುದ್ದ ಯಾವುದೇ ಕ್ರಿಮಿನಲ್ ಪ್ರಕರಣಗಳು ಬಾಕಿಯಿಲ್ಲ. ತಮ್ಮ ಪತ್ನಿ ಜಶೋದಾಬೆನ್ ಎಂದು ನಮೂದಿಸಿದ್ದಾರೆ.