ಸದ್ಯ ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣದ ಚರ್ಚೆಯ ಜೊತೆಗೆ ಜಾತಿ ಜನಗಣತಿ ಸಹ ಜೋರು ಸದ್ದು ಮಾಡುತ್ತಿದೆ. ಜಾತಿಗಣತಿ ಕುರಿತು ಪರ-ವಿರೋಧ ಚರ್ಚೆಗಳೂ ಸಹ ಕೇಳಿಬರುತ್ತಿವೆ. ಜೊತೆಗೆ ಸರ್ಕಾರದ ಹಣ ಸಹ ಈ ಜಾತಿ ಜನಗಣತಿಗೆ ಖರ್ಚು ಮಾಡಲಾಗಿದೆ. ನಮ್ಮ ರಾಷ್ಟ್ರ ಜಾತ್ಯಾತೀತ ರಾಷ್ಟ್ರವಾಗಿದ್ದಾಗ ಜಾತಿ ಗಣತಿ ಏಕೆ ಬೇಕು ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ (Pejavara Sri) ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕದ ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (K.S Eshwarappa) ರವರ ಮನೆಗೆ ಪೇಜಾವರ ಶ್ರೀಗಳು (Pejavara Sri) ಭೇಟಿ ನೀಡಿದ್ದರು. ಈ ವೇಳೆ ಜಾತಿಗಣತಿ ಬಗ್ಗೆ ಮಾತನಾಡಿದರು. ಒಂದು ಕಡೆ ಜಾತಿ ಆಧಾರದ ಮೇಲೆ ರಾಜಕೀಯ ಬೇಡ ಅಂತಾ ಹೇಳ್ತೀರಿ. ಮತ್ತೊಂದು ಕಡೆ ಜಾತಿಗಣತಿ ಎನ್ನುತ್ತೀರಾ, ಈ ಜಾತಿ ಗಣತಿ ಏಕೆ ಬೇಕು ಎಂಬುದು ತಿಳಿಯುತ್ತಿಲ್ಲ. ನಾನು ಅಯೋಧ್ಯೆಗೆ ಹೋಗಿ ಬಂದಿದ್ದೇನೆ. ಅನೇಕ ಜನ ಭಕ್ತರು ರಾಮತಾರಕ ಹೋಮ ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರದ ಉಳಿದ ಕಾಮಗಾರಿ ಭರದಿಂದ ಸಾಗುತ್ತಿದೆ. ಇನ್ನೂ ಒಂದು ವರ್ಷದಲ್ಲಿ ಶ್ರೀರಾಮ ಮಂದರಿ ಪೂರ್ಣವಾಗಲಿದೆ ಎಂದರು.
ಇನ್ನೂ ರಾಮರಾಜ್ಯ ಸ್ಥಾಪನೆಯಾಗಬೇಕಾದರೇ ನಮಗೆ ರಾಮಮಂದಿರ ಬೇಕಿದೆ. ಇದೀಗ ಪ್ರಜಾರಾಜ್ಯವಿದೆ ಆದರೂ ರಾಮರಾಜ್ಯ ಹೇಗೆ ಅಂದ್ರೇ ರಾಮನ ಆದರ್ಶಗಳನ್ನು ಮೈಗೂಡಿಸಿಕೊಂಡು ನಮ್ಮ ಸುತ್ತಮುತ್ತಲಿನ ದುಃಖಿತರಿಗೆ ಸೇವೆ ಮಾಡಿದರೇ ಅದರು ರಾಮನ ಸೇವೆ ಮಾಡಿದಂತಾಗುತ್ತದೆ ಎಂದು ಸಲಹೆ ನೀಡಿದರು. ಬಳಿಕ ಈಶ್ವರಪ್ಪ ದಂಪತಿ ಪೇಜಾವರ ಶ್ರೀಗಳ ಆಶೀರ್ವಾದ ಪಡೆದುಕೊಂಡರು. ಈ ಸಮಯದಲ್ಲಿ ಮಾತನಾಡಿದ ಮಾಜಿ ಡಿಸಿಎಂ ಈಶ್ವರಪ್ಪ, ಉಡುಪಿ ಶ್ರೀ ಕೃಷ್ಣ ಮಠಕ್ಕೂ ನಮಗೂ ಕೃಷ್ಣ ಮತ್ತು ಕನಕದಾಸರ ಸಂಬಂಧವಿದೆ. ಪೇಜಾವರ ಶ್ರೀಗಳು ಹೊಸಪೇಟೆಗೆ ಹೋಗುತ್ತಿದ್ದರು. ಆದ್ದರಿಂದ ಸೌಹಾರ್ದಯುತವಾಗಿ ನಮ್ಮ ಮನೆಗೆ ಬಂದಿದ್ದರು ಎಂದರು.