ಗುಡಿಬಂಡೆ: ವಿದ್ಯಾರ್ಥಿ ಜೀವನ ಅತ್ಯಂತ ಪ್ರಮುಖವಾದ ಘಟ್ಟವಾಗಿದ್ದು, ಈ ಸಮಯದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಸೇರಿದಂತೆ ಇತರೆ ದುಶ್ವಟಗಳಿಗೆ ದಾಸರಾಗದೇ ಓದುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಸರ್ಕಾರಿ ಬಾಲಕರ ಪ್ರೌಢಶಾಲೆಯ ಶಿಕ್ಷಕ ಕೆ.ಸಿ.ಮಂಜುನಾಥ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಅತ್ಯಂತ ಪ್ರಮುಖವಾದ ಘಟ್ಟವಾಗಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಬೇರೆ ವಿಚಾರಗಳತ್ತ ಗಮನ ಹರಿಸಬಾರದು. ಒಂದು ವೇಳೆ ನೀವು ದುಶ್ಚಟಗಳಿಗೆ ಬಲಿಯಾದರೇ ನಿಮ್ಮ ಇಡೀ ಜೀವನ ನಾಶವಾಗುತ್ತದೆ. ಸಮಾಜದ ಸ್ವಾಸ್ಥ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕೆಟ್ಟ ಚಟಗಳಿಗೆ ದಾಸರಾಗದೇ ಓದಿನ ಕಡೆ ಗಮನ ಹರಿಸಿ ಉತ್ತಮ ಫಲಿತಾಂಶ ಪಡೆದು ಮುಂದಿನ ಜೀವನ ರೂಪಿಸಿಕೊಳ್ಳಬೇಕೆಂದರು.
ಬಳಿಕ ಜನ ಜಾಗೃತಿ ವೇದಿಕೆಯ ಸದಸ್ಯೆ ಪರಿಮಳ ಮಾತನಾಡಿ, ಮನುಷ್ಯನಿಗೆ ಆರೋಗ್ಯ ಎಂಬುದು ತುಂಬಾನೆ ಮುಖ್ಯ. ನಮ್ಮ ಆರೋಗ್ಯ ಚೆನ್ನಾಗಿದ್ದರೇ ಓಳ್ಳೆಯ ಜೀವನ ನಡೆಸಬಹುದು. ತಾವುಗಳು ದುಶ್ಚಟಗಳಿಗೆ ದಾಸರಾದರೇ ನಿಮ್ಮ ಆರೋಗ್ಯ ಕೆಡುತ್ತದೆ. ಅದರಿಂದ ನಿಮ್ಮ ಜೀವನವೇ ಹಾಳಾಗುತ್ತದೆ. ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಸಮಾಜವನ್ನು ಸಹ ಸುಸ್ಥಿತಿಯಲ್ಲಿಡುವುದು ಮುಖ್ಯವಾಗಿದೆ ಎಂದರು. ಇದೇ ಸಮಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ಸಂಯೋಜಕ ಮಂಜುನಾಥ್ ಮಾತನಾಡಿ, ಯುವಜನತೆಯ ದೇಶದ ಭಾವೀ ಭವಿಷ್ಯ ಹಾಗಾಗಿ ಇಂದು ಸರ್ಕಾರ ಯುವ ಜನತೆಯ ಜಾಗೃತಿಯೇ ತನ್ನ ಮೂಲ ಹಾಗೂ ಮುಖ್ಯ ಉದ್ದೇಶವಾಗಿ ಕಾರ್ಯ ನಿರ್ವಹಿತ್ತಿದೆ ಅದಕ್ಕೆ ಯುವ ಜನತೆ ಜಾಗೃತರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪೊಲೀಸ್ ಠಾಣೆಯ ನಂಜುಂಡ ಶರ್ಮಾ, ಶಿಕ್ಷಣ ಇಲಾಖೆಯ ಬಿ.ಆರ್.ಪಿ ರಾಘವೇಂದ್ರ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದರು. ಈ ವೇಳೆ ಗುಡಿಬಂಡೆ ಮೇಲ್ವಿಚಾರಕರಾದ ಶ್ರೀ ದಯಾನಿಧಿ, ಶಿಕ್ಷಕರಾದ ಸಿದ್ದೇಶ್ ಬಂಡಿಮನೆ, ಅಂಜಿನಪ್ಪ, ರಾಧಾ ರವರು ಹಾಗೂ ಸೇವಾ ಪ್ರತಿನಿಧಿಗಳು ಸುಜಾತ ಮತ್ತು ಶಿವಮ್ಮ ಸೇರಿದಂತೆ ಹಲವರಿದ್ದರು.