ಆಂಧ್ರಪ್ರದೇಶದಲ್ಲಿ ಈ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವೈ.ಎಸ್.ಆರ್ ಕಾಂಗ್ರೇಸ್ ಪಕ್ಷ ಹೀನಾಯ ಸೋಲು ಕಂಡಿದೆ. ಟಿಡಿಪಿ-ಜನಸೇನಾ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಭರ್ಜರಿ ಜಯಗಳಿಸಿದೆ. ನೂತನ ಮುಖ್ಯಮಂತ್ರಿಯಾಗಿ ಟಿಡಿಪಿ ನಾಯಕ ನಾರಾ ಚಂದ್ರಬಾಬು ನಾಯ್ಡು ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ಜನಸೇನಾ ನಾಯಕ ಪವನ್ ಕಲ್ಯಾಣ್ ರವರು ಆಂಧ್ರಪ್ರದೇಶದ ನೂತನ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಆಂಧ್ರಪ್ರದೇಶದ ನೂತನ ಉಪಮುಖ್ಯಮಂತ್ರಿಯಾಗಿ ನಟ ಕಂ ರಾಜಕಾರಣಿ ಪವನ್ ಕಲ್ಯಾಣ್ ರವರು ಬುಧವಾರ (ಜೂನ್ 19)ವಿಜಯವಾಡದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ವೇದ ಘೋಷಗಳೊಂದಿಗೆ ನಡೆದ ಸಮಾರಂಭದಲ್ಲಿ ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪಿಠಾಪುರಂ ವಿಧಾನಸಭಾ ಕ್ಷೇತ್ರದಿಂದ ಪ್ರತಿನಿಧಿಸಿರುವ ಪವನ್ ಕಲ್ಯಾಣ್ ಭಾರಿ ಅಂತರದಿಂದ ಜಯ ಗಳಿಸಿದ್ದರು. ಜನಸೇನಾ ಪಕ್ಷ ಸ್ಪರ್ಧೆ ಮಾಡಿದ್ದ ಎಲ್ಲಾ ಕ್ಷೇತ್ರಗಳಲ್ಲೂ ಜಯ ಗಳಿಸಿದೆ. ಮೊದಲ ಬಾರಿಗೆ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಬಳಿಕ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ವಿಡಿಯೋ ನೋಡಲು ಈ ಲಿಂಕ್ ಓಪೆನ್ ಮಾಡಿ: https://fb.watch/sOC0NaiXuH/
ಇನ್ನೂ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಪವನ್ ಕಲ್ಯಾಣ್ ರವರಿಗೆ ಜನಸೇನಾ ಮುಖಂಡರು, ಟಿಡಿಪಿ ನಾಯಕರು, ಅಭಿಮಾನಿಗಳು ಶುಭಾಷಯಗಳನ್ನು ಕೋರಿದ್ದಾರೆ. ಪಿಠಾಪುರಂ ಕ್ಷೇತ್ರದಿಂದ ಎಂ.ಎಲ್.ಎ ಆಗಿ ಗೆದ್ದು ಮೊದಲ ಬಾರಿಗೆ ಸಚಿವರಾಗಿದ್ದಾರೆ. ಈ ವಾರದ ಆರಂಭದಲ್ಲಿ ಸಿಎಂ ಚಂದ್ರಬಾಬು ನಾಯ್ಡು ರವರು ತಮ್ಮ ಸಂಪುಟದಲ್ಲಿ ಪವನ್ ಕಲ್ಯಾಣ್ ರವರಿಗೆ ಉಪಮುಖ್ಯಮಂತ್ರಿ ಸ್ಥಾನದ ಜೊತೆಗೆ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ, ಗ್ರಾಮೀಣ ನೀರು ಸರಬರಾಜು, ಪರಿಸರ ಮತ್ತು ಅರಣ್ಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಗಳ ಜವಾಬ್ದಾರಿಗಳನ್ನು ವಹಿಸಲಾಗಿದೆ. ವೈ.ಎಸ್.ಆರ್ ಕಾಂಗ್ರೇಸ್ ಪಕ್ಷದಿಂದ ಪಿಠಾಪುರಂನಲ್ಲಿ ಸ್ಪರ್ಧೆ ಮಾಡಿದ್ದ ವಂಗ ಗೀತಾ ರವರ ವಿರುದ್ದ ಪವನ್ ಕಲ್ಯಾಣ್ ಜನಸೇನಾ ಪಕ್ಷದಿಂದ ಸ್ಪರ್ಧೆ ಮಾಡಿದ್ದು, 70 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯ ಗಳಿಸಿದ್ದರು. ವಿಧಾನಸಭೆ ಹಾಗೂ ಲೋಕಸಭೆ ಎರಡೂ ಚುನಾವಣೆಗಳಲ್ಲೂ ಜನಸೇನಾ ಪಕ್ಷ ಶೇ.100 ರಷ್ಟು ಸಾಧನೆ ಮಾಡಿ ಇತಿಹಾಸ ಸೃಷ್ಟಿಸಿದೆ.