ಕರ್ನಾಟಕದ ಕೊಪ್ಪಳದ ಗಂಗಾವತಿ ತಾಲೂಕಿನ ಚಿಕ್ಕರಾಂಪೂರ ಗ್ರಾಮದಲ್ಲಿರುವ ರಾಮಭಕ್ತ ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ ತುಂಬಾನೆ ಪ್ರಸಿದ್ದಿ ಪಡೆದುಕೊಂಡಿದೆ. ಪ್ರತಿನಿತ್ಯ ನೂರಾರು ಸಂಖ್ಯೆಯ ಹನುಮ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವಂತಹ ಈ ದೇವಾಲಯದ ಹುಂಡಿ ಎಣಿಕೆಯ ವೇಳೆ ಮೊದಲ ಬಾರಿಗೆ ಪಾಕಿಸ್ತಾನದ ನಾಣ್ಯ ಪತ್ತೆಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.
ರಾಮಭಕ್ತ ಹನುಮದ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ದೇವಾಸ್ಥಾನದ ಹುಂಡಿಯಲ್ಲಿನ ಕಾಣಿಕೆಗಳನ್ನು ಪ್ರತಿ ತಿಂಗಳು ಎಣಿಕೆ ಮಾಡಲಾಗುತ್ತದೆ. ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ಹಂಪಿ ಕಡೆ ಪ್ರವಾಸಕ್ಕೆ ಬರುವಂತಹ ವಿದೇಶಿಗರೂ ಸಹ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುತ್ತಿರುತ್ತಾರೆ. ದೇವಾಲಯಕ್ಕೆ ಭೇಟಿ ನೀಡುವಂತಹ ವಿದೇಶಿಗರೂ ಸಹ ತಮ್ಮ ದೇಶದ ನಾಣ್ಯ, ನೋಟುಗಳನ್ನು ಹುಂಡಿಯಲ್ಲಿ ಹಾಕುವುದು ಸಾಮಾನ್ಯ. ಈ ಬಾರಿ ಹುಂಡಿ ಎಣಿಕೆ ಸಮಯದಲ್ಲಿ ಮೊದಲ ಬಾರಿ ಪಾಕಿಸ್ತಾನದ ನಾಣ್ಯವೊಂದು ಪತ್ತೆಯಾಗಿದ್ದು, ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಐದು ವಿದೇಶಿ ನಾಣ್ಯ ಸೇರಿ ಹುಂಡಿಯಲ್ಲಿ ಒಟ್ಟು 31.21 ಲಕ್ಷ ರೂಪಾಯಿ ನಗದು ಹಣ ಸಂಗ್ರಹವಾಗಿದೆ. ಕಳೆದ ಮಾರ್ಚ್ 27 ರಿಂದ ಇಲ್ಲಿಯವರೆಗೂ ಮೇ.21 ರವರೆಗಿನ ಅವಧಿಯಲ್ಲಿ 31.21 ಲಕ್ಷ ಹಣ ಸಂಗ್ರಹವಾಗಿದೆ.
ಇನ್ನೂ ಕೊಪ್ಪಳದ ಸಹಾಯಕ ಆಯುಕ್ತೆ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ರವರ ಸೂಚನೆ ಮೇರೆಗೆ ತಹಸೀಲ್ದಾರ್ ನಾಗರಾಜ್ ನೇತೃತ್ವದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ದೇವಸ್ಥಾನದ ಸಿಬ್ಬಂದಿ ಮಂಗಳವಾರ ದೇವಾಲಯದ ಹುಂಡಿಯನ್ನು ಎಣಿಕೆ ಮಾಡಿದರು. ಈ ಸಮಯದಲ್ಲಿ ಮೊರಾಕ್ಕೋ, ಶ್ರೀಲಂಕಾ, ಅಮೇರಿಕಾ, ನೇಪಾಳ ಹಾಗೂ ಪಾಕಿಸ್ತಾನದ ನಾಣ್ಯಗಳು ಪತ್ತೆಯಾಗಿದೆ. ಮೊದಲ ಬಾರಿಗೆ ಪಾಕಿಸ್ತಾನದ ಐದು ರೂಪಾಯಿ ಮುಖಬೆಲೆ ನಾಣ್ಯ ಪತ್ತೆಯಾಗಿದೆ. ಯುನೈಟೆಡ್ ಸ್ಟೇಟ್ ಆಫ್ ಅಮೇರಿಕಾದ ಒಂದು ಸೆಂಟ್, ನೇಪಾಳದ ಒಂದು ನಾಣ್ಯ, ಶ್ರೀಲಂಕಾದ ಐದು ರೂಪಾಯಿ ನಾಣ್ಯಗಳು ಹಾಘೂ ಮೊರಾಕ್ಕೋದಾ ಒಂದು ದಿರಮ್ ಹುಂಡಿಯಲ್ಲಿ ಸಿಕ್ಕಿದೆ ಎಂದು ತಿಳಿದುಬಂದಿದೆ.