ಕೆಲವು ದಿನಗಳಿಂದ ಪಾಕ್ ಆಕ್ರಮಿತ ಕಾಶ್ಮೀರ(POK) ನಲ್ಲಿ ಬೆಲೆ ಏರಿಕೆ ಸೇರಿದಂತೆ ವಿವಿಧ ಸವಲತ್ತುಗಳು ಸಿಗದ ಕಾರಣ ದೊಡ್ಡ ಮಟ್ಟದಲ್ಲೇ ಸರ್ಕಾರದ ವಿರುದ್ದ ಆಕ್ರೋಷ ಹೊರಹಾಕುತ್ತಾ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯನ್ನು ಹತ್ತಿಕ್ಕಲು ಅಲ್ಲಿನ ಸರ್ಕಾರ ಸಹ ಹರಸಾಹಸ ಪಟ್ಟಿತ್ತು. ಆದರೂ ಸಹ ಪ್ರತಿಭಟನಾಕಾರರು ಮಣಿಯದೇ ಪ್ರತಿಭಟನೆಯನ್ನು ಮುಂದುವರೆಸಿದ್ದರು. ಇದೀಗ ಪ್ರತಿಭಟನಾಕಾರರ ಹೋರಾಟಕ್ಕೆಮಣಿದ ಪಾಕ್ ಸರ್ಕಾರ ಪಿಒಕೆ ಜನರ ಬೇಡಿಕೆಗಳನ್ನು ಈಡೇರಿಸಲು 2300 ಕೋಟಿ ಪ್ಯಾಕೇಜ್ ಅನ್ನು ಅಲ್ಲಿನ ಪ್ರಧಾನಿ ಶಹಬಾಜ್ ಷರೀಫ್ ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಜೀವನ ಅಸ್ತವ್ಯಸ್ತ ಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶ ಸೇರಿದಂತೆ ಮುಜಾಫ್ಫರಾಬಾದ್, ಮೀರ್ ಪುರ್, ರಾವಲ್ ಕೋಟ್, ಪೂಂಚ ಸೇರಿದಂತೆ ಅನೇಕ ಕಡೆ ಜನರು ಪ್ರತಿಭಟನೆಯನ್ನು ನಡೆಸಿದರು. ಈ ಪ್ರತಿಭಟನೆ ಹಿಂಸಾಚಾರಕ್ಕೂ ಸಹ ಗುರಿಯಾಗಿತ್ತು. ಪೊಲೀಸ್ ಅಧಿಕಾರಿಗಳೂ ಸೇರಿದಂತೆ ಅನೇಕರು ಮೃತಪಟ್ಟಿದ್ದರು. ಭಾರಿ ಹಿಂಸಾಚಾರ ಸಹ ನಡೆದಿತ್ತು. ಕಳೆದ ಭಾನುವಾರ ನಡೆದ ಪ್ರತಿಭಟನೆಯ ವೇಳೆ ಭದ್ರತಾ ಪಡೆ ಹಾಗೂ ಪ್ರತಿಭಟನಾಕಾರರ ನಡುವಣ ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದು, ನೂರು ಮಂದಿ ಗಾಯಗೊಂಡಿದ್ದರು.
ಇನ್ನೂ ಪ್ರತಿಭಟನೆಯ ಕಾವು ಏರುತ್ತಿದ್ದಂತೆ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಸೋಮವಾರ ಪಾಕ್ ಆಕ್ರಮಿತ ಕಾಶ್ಮಿರದ ಸರ್ಕಾರ ಹಾಗೂ ಕಾಶ್ಮೀರಿ ಪ್ರತಿಭಟನಕಾರ ನಾಯಕರ ಜೊತೆಗೆ ಸಂದಾನ ನಡೆಸಿದರು. ಈ ವೇಳೆ ಪ್ರತಿಭಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಪಾಕ್ ಆಕ್ರಮಿತ ಕಾಶ್ಮೀರದ ಜನರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೂಡಲೇ 2300 ಕೋಟಿ ಪಾಕಿಸ್ತಾನಿ ರೂಪಾಯಿಗಳನ್ನು ನೀಡುವುದಾಗಿ ಘೋಷಣೆ ಮಾಡಿದರು. ಸದ್ಯ ಸರ್ಕಾರದ ಈ ಘೋಷಣೆಯಿಂದ ಪ್ರತಿಭಟನೆ ತಣ್ಣಗಾಗಿದೆ ಎಂದು ಪಾಕ್ ಪ್ರಧಾನಿ ಕಚೇರಿ ತಿಳಿಸಿದೆ ಎನ್ನಲಾಗಿದೆ.