ಮುಡಾ ಸೈಟು (MUDA SCAM) ಹಂಚಿಕೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಕಲಿ ದಾಖಲೆ ಸೃಷ್ಟಿ ಮಾಡುವ ಮೂಲಕ ವಂಚನೆ ಮಾಡಿ ಕೋಟ್ಯಂತರ ನಿವೇಶನ ಪಡೆದ ಆರೋಪ ಹೊರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದಾ ಮಲ್ಲಿಕಾರ್ಜುನಸ್ವಾಮಿ ಹಾಗೂ ಭೂ ಮಾಲೀಕ ಎಂದು ಹೇಳುವ ದೇವರಾಜು ಹಾಗೂ ಕುಟುಂಬದವರ ವಿರುದ್ದ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಸದ್ಯ ಮುಡಾ ಸೈಟು ಹಂಚಿಕೆ ಹಗರಣ ಭಾರಿ ಸದ್ದು ಮಾಡುತ್ತಿದೆ. ವಿಪಕ್ಷಗಳು ಈ ಪ್ರಕರಣದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿವೆ. ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಎಂಬುವವರು ಮೂಡಾದಲ್ಲಿ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ಸಿಎಂ ಪತ್ನಿಗೆ 14 ನಿವೇಶನಗಳು ಮಂಜೂರಾದ ದಾಖಲೆಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಇನ್ನೂ ಈ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದರು. ತಮ್ಮ ಧರ್ಮ ಪತ್ನಿಗೆ ಸೇರಿದ ಜಮೀನನ್ನು ಮೂಡಾ ಸ್ವಾಧೀನ ಮಾಡಿಕೊಂಡಿತ್ತು. ಅದಕ್ಕೆ ಪರ್ಯಾಯವಾಗಿ ಮೂಡಾ 50:50 ಅನುಪಾತದಲ್ಲಿ ಬೇರೆ ಕಡೆ ನಿವೇಶಗಳನ್ನು ಕೊಡಲಾಗಿತ್ತು. ಅದರು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕೊಡಲಾಗಿತ್ತು. ಬಿಜೆಪಿ ರವರು ಅಧಿಕಾರದಲ್ಲಿರುವಾಗ ನಮಗೆ ನಿವೇಶನ ಕೊಟ್ಟಿದ್ದಾರೆ. ನನ್ನ ಪತ್ನಿಗೆ ಸೇರಿದ 3.16 ಎಕರೆ ಜಮೀನನ್ನು ರಿಂಗ್ ರೋಡ್ ಪಕ್ಕದ ಕೆಸರೆಯಲ್ಲಿದೆ ಅದನ್ನು ನನ್ನ ಭಾವ ಮೈದುನ ಪಡೆದಿದ್ದು, ನನ್ನ ಪತ್ನಿಗೆ ದಾನವಾಗಿ ಕೊಟ್ಟಿದ್ದರು. ನಾನು ಅಧಿಕಾರದಲ್ಲಿದ್ದಾಗ ತೆಗೆದುಕೊಳ್ಳಲು ಹೋಗಿಲ್ಲ. 50:50 ಅನುಪಾದಲ್ಲಿ ಸೈಟ್ ಗಳನ್ನ ಕೊಡಬೇಕು ಎಂಬ ಕಾನೂನು ಮಾಡಿದ್ದು ಬಿಜೆಪಿಯವರೇ ಎಂದು ಹೇಳಿದ್ದರು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವವರು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಜೊತೆಗೆ ರಾಜ್ಯಪಾಲ, ರಾಜ್ಯ ಮುಖ್ಯಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೂ ಪತ್ರ ಬರೆದಿದ್ದಾರೆ. ಈ ಪ್ರಕರಣದ ಸಂಬಂಧ ಹಲವಾರು ಅನುಮಾನಗಳನ್ನು ಸಹ ಹೊರಹಾಕಿದ್ದಾರೆ. ಪಾರ್ವತಿ ಪ್ರಕರಣದಲ್ಲಿ ಭೂ ಸ್ವಾಧೀನದಿಂದ ಕೈಬಿಟ್ಟಿರುವ ರಾಜ್ಯಪತ್ರದ ಬಗ್ಗೆ ಅನುಮಾನ ಇದೆ. ಮೂಲ ಭೂ ಮಾಲೀಕರ ಮಗ ಎನ್ನುವ ದೇವರಾಜು ಅಸ್ತಿತ್ವದ ಬಗ್ಗೆ ಪ್ರಶ್ನೆ ಸಹ ಎದ್ದಿದೆ. ಜೊತೆಗೆ ಕೆಲವೊಂದು ಪ್ರಶ್ನೆಗಳನ್ನು ಸಹ ಅವರು ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ.