ಬಾಗೇಪಲ್ಲಿ: ಅರ್ಹ ರೈತರಿಗೆ ಬೆಳೆ ವಿಮೆ ಕೊಡಸದಿದ್ದರೆ ಬೆಳೆ ವಿಮೆ ವಂಚಿತ ರೈತರ ಪರವಾಗಿ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ದ ನಾನೇ ಖದ್ದಾಗಿ ನ್ಯಾಯಾಲಯದ ಮೊರೆಹೋಗಬೇಕಾಗುತ್ತೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕೃಷಿ ಇಲಾಖೆ ಅಧಿಕಾರಿ ಲಕ್ಷ್ಮೀ ರವರಿಗೆ ಎಚ್ಚರಿಕೆ ನೀಡಿದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರ ಅಧ್ಯಕ್ಷತೆಯಲ್ಲಿ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ತಾಲೂಕಿನಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆ ಆಗಿದೆ. ಈ ಭಾಗದ ರೈತರು ಬಿತ್ತನೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ, ಬಿತ್ತನೆ ಬೀಜ ಸೇರಿದಂತೆ ರಸಗೊಬ್ಬರ ಸದ್ಯಕ್ಕೆ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಅಧಿಕಾರಿ ಸಭೆಗೆ ತಿಳಿಸಿದಾಗ ನೀವು ಕಾಟಾಚಾರಕ್ಕೆ ಬೆಳೆ ವಿಮೆ ಸಮೀಕ್ಷೆ ಮಾಡಿರುವ ಪರಿಣಾಮ ತಾಲೂಕಿನ ಬಹುತೇಕ ಅರ್ಹ ರೈತರು ಬೆಳೆ ವಿಮೆಯಿಂದ ವಂಚಿತರಾಗಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ನಷ್ಟ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಬಗ್ಗೆ ಕಾಳಜಿವಹಿಸಿ ಸಮರ್ಪಕವಾಗಿ ಬೆಳೆ ಸಮೀಕ್ಷೆ ನಡೆಸಿ ಅರ್ಹ ರೈತರಿಗೆ ವಿಮೆ ಹಣ ಕೊಡಿಸಿ ಇಲ್ಲವಾದರೆ ಬೆಳೆ ವಿಮೆ ವಂಚಿತ ರೈತರ ಪರವಾಗಿ ನ್ಯಾಯಾಂಗ ಹೋರಾಟಕ್ಕೆ ಮುಂದಾಗಬೇಕಾಗುತ್ತೆ ಎಂದರು. ಕಳಪೆ ಬಿತ್ತನೆ ಬೀಜ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ನನಗೆ ಮಾಹಿತಿ ಬಂದಿದೆ ನೀವು ಏಕೆ ಕ್ರಮಕೈಗೊಂಡಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯಾವುದೇ ಕಾರಣಕ್ಕೂ ಕಳಪೆ ಬಿತ್ತನೆ ಬೀಜ ಮಾರಾಟಕ್ಕೆ ಅವಕಾಶ ನೀಡಬೇಡಿ, ಗುಣಮಟ್ಟದ ಬಿತ್ತನೆ ಬೀಜ ವಿತರಿಸಿ, ಕಳಪೆ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಸುವವರ ಮೇಲೆ ನಿಗಾವಹಿಸುವಂತೆ ಸೂಚನೆ ನೀಡಿದರು.
ಮಳೆಗಾಲ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಮಲೇರಿಯಾ, ಡೆಂಗ್ಯೂ ಇತ್ಯಾಧಿ ಸಾಂಕ್ರಾಮಿಕ ಕಾಯಿಲೆ ಹರಡದಂತೆ ಕ್ರಮಕೈಗೊಳ್ಳಲಾಗಿದೆ, ಹಲವು ಡೆಂಗ್ಯೂ ಪ್ರಕರಣಗಳ ದಾಖಲಾಗಿವೆ ಆದರೆ ಯಾವುದೇ ಸಾವು ಇಲ್ಲ, ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ತಾಲೂಕಿನಲ್ಲಿ ವೈದ್ಯರ ಕೊರತೆ ಇದೆ ಎಂದು ಟಿಹೆಚ್‍ಓ ಡಾ.ಸತ್ಯನಾರಾಯಣರೆಡ್ಡಿ ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ವೈದ್ಯ ಕೊರತೆ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು. ನಿಯಮ ಉಲ್ಲಂಘಿಸಿ ಮಿತಿಮೀರಿದ ಭಾರ ಹೊತ್ತ ಗ್ರಾನೈಟ್ ಕಲ್ಲು ದಿಂಮ್ಮಿಗಳನ್ನು ಲಾರಿ ಸಾಗಿಸುವುದರಿಂದ ರಸ್ತೆ ಹಾಳಾಗುತ್ತಿವೆ ತಕ್ಷಣ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಆರ್.ಟಿ.ಓ ಅಧಿಕಾರಿಗಳ ತೆಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು
ನಂತರ ವಿವಿಧ ಇಲಾಖೆ ಅಧಿಕಾರಿಗಳಿಂದ ಇಲಾಖಾವಾರು ಪ್ರಗತಿಯ ಬಗ್ಗೆ ಮಾಹಿತಿಯನ್ನು ಪಡೆದರು. ಸರ್ಕಾರದಿಂದ ನೇಕಗೊಂಡಿರುವ ನೂತನ ನಾಮನಿರ್ದೇಶಿತ ಸದಸ್ಯರಾದ ಪಿ.ಮಂಜುನಾಥರೆಡ್ಡಿ, ರಿಜ್ವಾನ್ ಬಾಷಾ, ಬಿ.ವಿ.ವೆಂಕಟರವಣ, ರಘುನಾಥರೆಡ್ಡಿ, ರಾಮಕೃಷ್ಣ ರವರನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿನಂಧಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಪ್ರಶಾಂತ್ ಕೆ ಪಾಟಿಲ್, ತಾ.ಪಂ ಇಒ ರಮೇಶ್ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.