Marriage – ಮಂಡ್ಯ ತಾಲೂಕಿನ ಕೆ.ಗೌಡಗೆರೆ ಎಂಬ ಗ್ರಾಮದಲ್ಲಿ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಜಾಹ್ನವಿ (26) ಎಂದು ಗುರ್ತಿಸಲಾಗಿದೆ. ಇನ್ನೂ ಜಾಹ್ನವಿ ಕುಟುಂಬಸ್ಥರು ಆಕೆಯ ಪತಿಯ ವಿರುದ್ದ ಕೊಲೆ ಆರೋಪ ಮಾಡಿದ್ದಾರೆ. ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಳೆದ 4 ವರ್ಷಗಳ ಹಿಂದೆ ಜಾಹ್ನವಿಗೆ ಯಶ್ವಂತ್ ಎಂಬ ವ್ಯಕ್ತಿಯೊಂದಿಗೆ ಮದುವೆಯಾಗಿತ್ತು. ಯಶ್ವಂತ್ ಕಾಂಗ್ರೇಸ್ ಮುಖಂಡನಾಗಿದ್ದಾನೆ. ಈ ಜೋಡಿಯ ಮದುವೆಯಾದಾಗಿನಿಂದ ಸದಾ ಕುಡಿದು ಜಾಹ್ನವಿಗೆ ಕಿರುಕುಳ ನೀಡುತ್ತಿದ್ದ, ಆಕೆಯ ಮೇಲೆ ಮನಸ್ಸೋ ಇಚ್ಚೆ ಹಲ್ಲೆ ಮಾಡುತ್ತಿದ್ದ ಎಂದು ಜಾಹ್ನವಿ ಕುಟುಂಬಸ್ಥರು ಆರೋಪಿಸಿದ್ದಾರೆ. ಕಳೆದ ಗುರುವಾರ ಜಾಹ್ನವಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪತಿ ಯಶ್ವಂತ್ ಕುಟುಂಬಸ್ಥರಿಗೆ ತಿಳಿಸಿದ್ದಾನೆ. ನಂತರ ಸ್ಥಳಕ್ಕೆ ಬಂದು ಪೋಷಕರು ನೋಡಿದಾಗ ಜಾಹ್ನವಿ ಮೃತದೇಹದ ಮೇಲೆ ರಕ್ತದ ಕಲೆ ಇತ್ತು ಎಂದು ಹೇಳಲಾಗುತ್ತಿದೆ. ಯಶ್ವಂತ್ ಕುಡಿದು ಗಾಂಜಾ ಸೇವನೆ ಮಾಡಿ ತಮ್ಮ ಮಗಳ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

ಪರೀಕ್ಷೆ ಭಯದಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಆತ್ಮಹತ್ಯೆ
ಇನ್ನೂ ಚಿತ್ರದುರ್ಗದಲ್ಲಿ ಮತ್ತೊಂದು ಮನಕಲಕುವ ಘಟನೆ ನಡೆದಿದೆ. SSLC ವಿದ್ಯಾರ್ಥಿಯೊಬ್ಬ ಪರೀಕ್ಷೆಯ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಚಿತ್ರದುರ್ಗ ನಗರದ ತಮಟಕಲ್ಲು ರಸ್ತೆಯ ಈಶ್ವರ ಬಡಾವಣೆಯಲ್ಲಿ ವಾಸವಾಗಿದ್ದ ರಾಕೇಶ್ (16) ಮೃತ ದುರ್ದೈವಿ ಎಂದು ಗುರ್ತಿಸಲಾಗಿದೆ. ತಾನೂ ಮುಂಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಫೇಲ್ ಆಗುತ್ತೇನೆ ಎಂಬ ಆತಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಗುರುವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.