ತಾವು ಒಬ್ಬರನ್ನೊಬ್ಬರು ಪ್ರೀತಿಸಿಕೊಂಡು, ಮನೆಯಲ್ಲಿ ಅವರ ಪ್ರೀತಿಯನ್ನು ಒಪ್ಪದ ಕಾರಣ ಯುವಕ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ. ಈ ಕಾರಣದಿಂದ ಸಿಟ್ಟಿಗೆದ್ದ ಯುವತಿಯ ಕಡೆಯವರು ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ ಘಟನೆಯೊಂದು ಹಾವೇರಿ ಜಿಲ್ಲೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಮಕ್ಕಳು ಮಾಡುವ ತಪ್ಪಿಗೆ ಕೆಲವೊಮ್ಮೆ ಹೆತ್ತವರು ಶಿಕ್ಷೆ ಅನುಭವಿಸುವಂತಹ ಘಟನೆಗಳ ಬಗ್ಗೆ ಕೇಳಿದ್ದೇವೆ. ಇತ್ತೀಚಿಗೆ ಪ್ರೀತಿಸಿ ಓಡಿಹೋದ ಮಕ್ಕಳ ಕಾರಣದಿಂದ ಅವರ ಪೋಷಕರು ಶಿಕ್ಷೆ ಅನುಭವಿಸಿದಂತಹ ಘಟನೆಗಳು ಕರ್ನಾಟಕದಲ್ಲಿ ನಡೆದಿದೆ. ಅಂತಹುದೇ ಘಟನೆಯೊಂದು ಇದೀಗ ಹಾವೇರಿಯಲ್ಲಿ ನಡೆದಿದೆ. ಯುವಕನೋರ್ವ ಯುವತಿಯೊಬ್ಬಳನ್ನು ಪ್ರೀತಿಸಿ ಕರೆದುಕೊಂಡು ಹೋಗಿದ್ದಾನೆ. ಈ ಕಾರಣದಿಂದ ಸಿಟ್ಟಿಗೆದ್ದ ಯುವತಿಯ ಪೋಷಕರು ಯುವಕನ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿದ್ದಾರೆ. ಆಕೆಗೆ ಅಮಾನವೀಯವಾಗಿ ಥಳಿಸಿದ್ದಾರೆ. ಮನಬಂದಂತೆ ಥಳಿಸಿ ಕ್ರೌರ್ಯ ಮೆರೆದಿದ್ದಾರೆ.
ಈ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ. ಅಂದಹಾಗೆ ಈ ಘಟನೆ 4 ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಮಹಿಳೆಯನ್ನು ಹನುಮವ್ವ ಮಡ್ಲೇರಿ (5೦) ಎಂದು ಗುರ್ತಿಸಲಾಗಿದೆ. ಈಕೆಯ ಮಗ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಗಳಾದ ಚಂದ್ರಪ್ಪ, ಗಂಗಪ್ಪ ಹಾಗೂ ಗುತ್ತೆವ್ವ ಎಂಬುವವರು ಮಗ ಮಾಡಿದ ತಪ್ಪಿಗೆ ಹನುಮವ್ವಳನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದಾರೆ. ಈ ಘಟನೆ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಕೆಲವು ತಿಂಗಳ ಹಿಂದೆಯಷ್ಟೆ ಕರ್ನಾಟಕದ ಬೆಳಗಾವಿಯ ವಂಟಮೂರಿ ಗ್ರಾಮದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಗಿತ್ತು. ಯುವಕ ಯುವತಿಯೊಂದಿಗೆ ಓಡಿ ಹೋದ ಎಂಬ ಕಾರಣಕ್ಕಾಗಿ ತಾಯಿಯನ್ನುಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿತ್ತು. ಈ ಘಟನೆ ದೇಶದಾದ್ಯಂತ ಭಾರಿ ಸುದ್ದಿಯಾಗಿತ್ತು. ಈ ಘಟನೆಯ ಬಳಿಕ ಪ್ರೇಮಿಗಳನ್ನು ಬೆಳಗಾವಿ ದಕ್ಷಣಿ ಉಪನೊಂದಣಿ ಕಚೇರಿಯಲ್ಲಿ ಮದುವೆ ಮಾಡಿಸಲಾಗಿತ್ತು. ಇದೀಗ ಹಾವೇರಿಯಲ್ಲಿ ಅಂತಹ ಘಟನೆ ನಡೆದಿದ್ದು ರಾಜ್ಯದಾದ್ಯಂತ ಆಕ್ರೋಷ ವ್ಯಕ್ತವಾಗುತ್ತಿದೆ.