ಕರ್ನಾಟಕದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್-ಬಿಜೆಪಿ ನಡುವೆ ಜಿದ್ದಾಜಿದ್ದಿ ನಡೆದಿತ್ತು. ಹಾಲಿ ಕಾಂಗ್ರೇಸ್ ಶಾಸಕ ಪ್ರದೀಪ್ ಈಶ್ವರ್ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಡಾ.ಕೆ.ಸುಧಾಕರ್ ರವರ ವಿರುದ್ದ ದೊಡ್ಡ ಮಟ್ಟದಲ್ಲೇ ವಾಗ್ದಾಳಿ ನಡೆಸಿದ್ದರು. ಅದರಲ್ಲೂ ಈ ಲೋಕಸಭಾ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್, ಕ್ಷೇತ್ರದಲ್ಲಿ ಡಾ.ಸುಧಾಕರ್ ಒಂದು ಮತ ಕಾಂಗ್ರೆಸ್ ಗಿಂತ ಹೆಚ್ಚು ಪಡೆದರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸವಾಲು ಹಾಕಿದ್ದರು. ಇದೀಗ ಚಿಕ್ಕಬಳ್ಳಾಪುರ ಮೈತ್ರಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರದೀಪ್ ಅಣ್ಣಾ ರಾಜೀನಾಮೆ ಯಾವಾಗ ಕೊಡ್ತೀರಣ್ಣ ಎಂದು ವ್ಯಂಗವಾಡುತ್ತಿದ್ದಾರೆ. ಸದ್ಯ ಚಿಕ್ಕಬಳ್ಳಾಪುರದಲ್ಲಿ ಪ್ರದೀಪ್ ಈಶ್ವರ್ ರಾಜೀನಾಮೆ ಪ್ರಸಂಗ ಭಾರಿ ಸದ್ದು ಮಾಡುತ್ತಿದೆ.
ಕಳೆದ 2023 ರ ವಿಧಾನಸಭಾ ಚುನಾವಣೆಯಿಂದಲೂ ಪ್ರದೀಪ್ ಈಶ್ವರ್ vs ಡಾ.ಕೆ.ಸುಧಾಕರ್ ನಡುವೆ ಮಾತಿನ ಯುದ್ದ ನಿರಂತರವಾಗಿ ನಡೆಯುತ್ತಲೇ ಇದೆ. ಲೋಕಸಭಾ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಗೆದ್ದ ಬಳಿಕ, ಡಾ.ಕೆ.ಸುಧಾಕರ್ ರವರಿಗೆ ಸವಾಲು ಹಾಕಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕಿಂತ ಒಂದು ಮತ ಹೆಚ್ಚು ಪಡೆದುಕೊಂಡರೇ ರಾಜೀನಾಮೆ ನೀಡುವುದಾಗಿ ಸವಾಲು ಹಾಕಿದ್ದರು. ಇದೀಗ ಡಾ.ಕೆ.ಸುಧಾಕರ್ ಒಂದು ಮತವಲ್ಲ ಬರೊಬ್ಬರಿ 1,12,866 ಮತಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿದ್ದಾರೆ. ಈ ಗೆಲುವಿನ ಸುದ್ದಿ ಹೊರಬರುತ್ತಿದ್ದಂತೆ ಸುಧಾಕರ್ ಗೆಲುವಿಗಿಂತ ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆ ಯಾವಾಗ ಎಂಬ ವಿಚಾರ ಭಾರಿ ಸದ್ದು ಮಾಡುತ್ತಿದೆ.
ಚಿಕ್ಕಬಳ್ಳಾಪುರ ಮಾತ್ರವಲ್ಲದೇ ರಾಜ್ಯದ ಹಲವು ಕಡೆ ಶಾಸಕ ಪ್ರದೀಪ್ ಈಶ್ವರ್ ರಾಜಿನಾಮೆ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ.ಈ ನಡುವೆ ಮಾಜಿ ಸಂಸದ ಪ್ರತಾಪ್ ಸಿಂಹ ಹೊಸ ಬಾಂಬ್ ಸಿಡಿಸಿದ್ದಾರೆ. ಪ್ರದೀಪ್ ಈಶ್ವರ್ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಪ್ರದೀಪ್ ಈಶ್ವರ್ ರವರ ಚಾಲೆಂಜ್ ಕುರಿತ ಹಳೇಯ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ‘Breaking News: ಇನ್ನು ಕೆಲವೇ ಗಂಟೆಗಳಲ್ಲಿ ಪ್ರದೀಪ್ ಈಶ್ವರ್ ರಾಜೀನಾಮೆ!’ ಅಂತಾ ಇದೀಗ ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಹಾಗೂ ಪ್ರದೀಪ್ ಈಶ್ವರ್ ಈ ಹಿಂದೆ ನೀಡಿದ್ದ ಹೇಳಿಕೆ ಇದೀಗ ಮತ್ತೊಮ್ಮೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಚರ್ಚೆಯಾಗುತ್ತಿದೆ.
ಇನ್ನೂ ಚಿಕ್ಕಬಳ್ಳಾಪುರದಲ್ಲಿ ಅನೇಕ ಯುವಕರು ಪ್ರದೀಪ್ ಅಣ್ಣಾ ಯಾವಾಗ ನಿಮ್ಮ ರಾಜೀನಾಮೆ, ನೀವು ಬೇಗ ರಾಜೀನಾಮೆ ಕೊಟ್ಟರೇ ನಾವು ನಾಮ ಪತ್ರ ಸಲ್ಲಿಸುತ್ತೇವೆ. ಎವಡ್ರಾ ಬುಜ್ಜಿ ಮಮ್ಮಲ್ಲನಿ ಆಪೇವಾಡು ಎಂಬೆಲ್ಲಾ ಡೈಲಾಗ್ ಗಳ ಮೂಲಕ ಅವರ ಪೊಟೋ, ವಿಡಿಯೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ. ಜೊತೆಗೆ ಪ್ರದೀಪ್ ಈಶ್ವರ್ ರವರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು ಎಂಬ ವಿಮರ್ಶೆ ಸಹ ನಡೆದಿತ್ತು. ಒಟ್ಟಿನಲ್ಲಿ ಪ್ರದೀಪ್ ಈಶ್ವರ್ ತಮ್ಮ ಮಾತಿನಂತೆ ರಾಜೀನಾಮೆ ನೀಡುತ್ತಾರಾ ಅಥವಾ ಬೇರೆ ಏನಾದರೂ ಹೇಳ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನೂ ಕಳೆದ ರಾತ್ರಿ ಸುಮಾರು 10.30 ರ ಸುಮಾರಿನಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮನೆಯ ಮೆಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಕಂದವಾರದಲ್ಲಿರುವ ಗೃಹ ಕಚೇರಿ ನಿವಾಸದ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಮನೆಯ ಬೃಹತ್ ಗಾತ್ರದ ಕಿಟಕಿ ಗಾಜು ಪುಡಿಯಾಗಿದೆ. ಮನೆಯ ಹಿಂಭಾಗದಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಕಲ್ಲು ತೂರಿದವರ ಪತ್ತೆಗಾಗಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಲೋಕಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೆ ಈ ಘಟನೆ ನಡೆದಿದ್ದು, ಚಿಕ್ಕಬಳ್ಳಾಪುರ ಡಿ.ವೈ.ಎಸ್.ಪಿ ಶಿವಕುಮಾರ್, ವೃತ್ತ ನಿರೀಕ್ಷಕ ಮಂಜುನಾಥ್ ಸೇರಿದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.