Local News – ಕೇವಲ ಉತ್ತಮ ಅಂಕಗಳಿಂದ ಮಾತ್ರ ಮಕ್ಕಳ ಭವಿಷ್ಯ ನಿರ್ಧಾರವಾಗುವುದಿಲ್ಲ. ಅವರಿಗೆ ಜೀವನ ಮೌಲ್ಯಗಳು, ಶಿಸ್ತು, ಮತ್ತು ಸಂಸ್ಕಾರದ ಪಾಠಗಳೂ ಮುಖ್ಯ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅಭಿಪ್ರಾಯಪಟ್ಟರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಆರ್.ಕೆ.ಎನ್. ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉತ್ತಮ ನಾಗರಿಕರನ್ನು ಸೃಷ್ಟಿಸಲು ಪೋಷಕರು, ಶಿಕ್ಷಕರು, ಮತ್ತು ಸಮಾಜದ ಸಹಕಾರ ಅಗತ್ಯ ಎಂದು ಅವರು ತಿಳಿಸಿದರು.

Local News – ಶಿಕ್ಷಕರ ಪಾತ್ರ ಮಹತ್ತರವಾದುದು
ಉತ್ತಮ ರಾಷ್ಟ್ರ ನಿರ್ಮಾಣ ದಲ್ಲಿ, ಪ್ರತಿಯೊಬ್ಬರ ವೈಯಕ್ತಿಕ ವಿಕಸನದಲ್ಲಿ ಪ್ರಬಲ ಪಾತ್ರ ವಹಿಸುವವರು ಶಿಕ್ಷಕರು ಎಂಬುದನ್ನು ಎಲ್ಲರಿಗೂ ತಿಳಿದಿರಬೇಕು. ಭಾರತೀಯ ಪರಂಪರೆಯಲ್ಲಿ ಗುರುವಿನ ಸ್ಥಾನ ಅತ್ಯುನ್ನತ. ಗುರು, ಆಚಾರ್ಯ, ಆಧ್ಯಾಪಕ, ಶಿಕ್ಷಕ, ಶಿಕ್ಷಕಿ ಎಂದು ಕರೆಯಿಸಿಕೊಳ್ಳುವ ಈ ಪವಿತ್ರಮಯ ಸ್ಥಾನಕ್ಕೆ ಬೆಲೆ ಕಟ್ಟಲಾಗದು. ಜೀವನದಲ್ಲಿ ಶಿಕ್ಷಕರ ಪಾತ್ರ ಹಿರಿಯದಾಗಿದೆ. ಜ್ಞಾನ ಮತ್ತು ಮೌಲ್ಯಗಳನ್ನು ತುಂಬಿ ನಮ್ಮ ಜೀವನಕ್ಕೆ ದಾರಿ ತೋರಿ, ಉತ್ತಮ ಬದುಕು ಕಟ್ಟಿಕೊಳ್ಳಲು ನೆರವಾದ ಗುರುವಿನ ಸ್ಮರಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಈ ಸ್ಥಾನಕ್ಕೆ ಅತ್ಯಂತ ಹೆಚ್ಚು ಗೌರವವಿದೆ, ತಮ್ಮ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಂತೆ ತಿಳಿಸಿದರು.
Local News – ಶಿಕ್ಷಕರಿಗೆ ಸನ್ಮಾನ
ಚಿಕ್ಕಬಳ್ಳಾಪುರ ಡಿಡಿಪಿಐ ರಮೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ನಂತರ ತಾಪಂ ಇಒ ನಾಗಮಣಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯ ಭಾಷಣಕಾರಾಗಿ ಶಿಡ್ಲಘಟ್ಟ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾದ್ಯಾಪಕರಾದ ವಿಜಯೇಂದ್ರ ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾರತ ರತ್ನ ಡಾ.ಎಸ್. ರಾಧಾಕೃಷ್ಣನ್ ಮತ್ತು ಸಾವಿತ್ರಿ ಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಪೂರ್ವದಲ್ಲಿ ಡಾ.ಎಸ್. ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆಯನ್ನು ಮಾಡಲಾಯಿತು.

Read this also : ಶಿಕ್ಷಕರ ಶ್ರಮ ಸಾರ್ಥಕವಾಗಲು ಮಕ್ಕಳ ಭವಿಷ್ಯ ಮುಖ್ಯ – ಶಾಸಕ ಸುಬ್ಬಾರೆಡ್ಡಿ
Local News – ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರು
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಿಗ್ಬತ್ ವುಲ್ಲಾ, ಬಿಇಒ ಕೃಷ್ಣಕುಮಾರಿ, ಪಪಂ ಅಧ್ಯಕ್ಷ ಎ. ವಿಕಾಸ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾರಾಯಣ ಸ್ವಾಮಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನಿಕೃಷ್ಣ, ನಿವೃತ್ತ ಶಿಕ್ಷಕ ಕೆ.ವಿ.ನಾರಾಯಣಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ, ಉಪಾಧ್ಯಕ್ಷ ಶ್ರೀರಾಮರೆಡ್ಡಿ, ಪಪಂ ಸದಸ್ಯರು, ತಾಲೂಕಿನ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಸೇರಿದಂತೆ ಹಲವರು ಇದ್ದರು.
