Local News – ಆರೋಗ್ಯವೇ ಮಹಾ ಭಾಗ್ಯ, ನಾವು ಆರೋಗ್ಯವಾಗಿದ್ದರೇ ಎಲ್ಲವನ್ನೂ ಮಾಡಬಹುದು. ಆರೋಗ್ಯಯುತ ವಾತಾವರಣ ನಿರ್ಮಾಣಕ್ಕಾಗಿ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಜೊತೆಗೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಹ ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಅತಿಕ್ ಪಾಷ ತಿಳಿಸಿದರು.

Local News – ಪ್ಲಾಸ್ಟಿಕ್ ಮುಕ್ತ, ಹಸಿರುಯುಕ್ತ ಸಮಾಜ ನಿರ್ಮಾಣಕ್ಕೆ ಪಣ ತೊಡಿ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ತಿರುಮಣಿ ಗ್ರಾಪಂ ವ್ಯಾಪ್ತಿಯ ಕಸ್ತೂರಬಾ ಗಾಂಧಿ ಬಾಲಿಕ ವಿದ್ಯಾಲಯ ಹಾಗೂ ಬೀಚಗಾನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಚತಾ ಹೀ ಸೇವಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರು ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಿ, ಪ್ಲಾಸ್ಟಿಕ್‌ಮುಕ್ತ, ಹಸಿರುಯುಕ್ತ ಸಮಾಜ ನಿರ್ಮಾಣಕ್ಕೆ ಪಣತೊಡಬೇಕು. ಸ್ವಚ್ಛತಾ ಹೀ ಸೇವಾ ಎಂಬುದು ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2 ರವರೆಗೆ ನಡೆಯುವ ಸ್ವಚ್ಛತಾ ಅಭಿಯಾನವಾಗಿದ್ದು, ಇದು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಘನತ್ಯಾಜ್ಯ ನಿರ್ವಹಣೆಗೆ ಒತ್ತು ನೀಡುತ್ತದೆ. ಈ ಅಭಿಯಾನವು ಸ್ವಚ್ಛ ಭಾರತ್ ಮಿಷನ್‌ನ ಒಂದು ಭಾಗವಾಗಿದ್ದು, ಸಮುದಾಯದ ಸಹಭಾಗಿತ್ವದ ಮೂಲಕ ಸ್ವಚ್ಛ ಭಾರತ ನಿರ್ಮಾಣದ ಗುರಿಯನ್ನು ಹೊಂದಿದೆ. ಈ ಕಾರ್ಯದಲ್ಲಿ ಜನರೂ ಸಹ ಕೈ ಜೋಡಿಸಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು ಎಂದರು.

Local News – ಹಸಿ ಹಾಗೂ ಒಣ ಕಸವನ್ನು ಮೂಲದಲ್ಲೇ ವಿಂಗಡಿಸಿ
ಬಳಿಕ ತಾಪಂ ಇಒ ನಾಗಮಣಿ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬಹುದು. ಈ ಕಾರ್ಯದಲ್ಲಿ ಸಾರ್ವಜನಿಕರೂ ಸಹ ಭಾಗಿಯಾಗಬೇಕಿದೆ. ಸಾರ್ವಜನಿಕರು ಗೃಹ ಆಧಾರಿತ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವಾಗಿ ಮೂಲದಲ್ಲೇ ವಿಂಗಡಿಸಿ ಕಸ ಸಂಗ್ರಹಣೆ ವಾಹನಗಳಿಗೆ ನೀಡಬೇಕು ಎಂದು ಹೇಳಿದರು. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸವನ್ನು ಸುರಿಯಬಾರದು. ತ್ಯಾಜ್ಯ ಪುನರ್ಬಳಕೆ, ಮರುಬಳಕೆ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಕಸ ಹಾಗೂ ಪ್ಲಾಸ್ಟಿಕ್ ಅನ್ನು ಎಲ್ಲೆಂದರಲ್ಲಿ ಬಿಸಾಡಿದರೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು. Read this also : Karnataka Government : ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ಗಿಫ್ಟ್: ಸರ್ಕಾರಿ ನೇಮಕಾತಿಯಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ…!
Local News – ಪ್ರತಿಜ್ಞಾ ವಿಧಿ ಸ್ವೀಕಾರ
ಇನ್ನೂ ತಾಲ್ಲೂಕಿನ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಸ್ವಚ್ಛತಾ ಆಂದೋಲನ ಹಮ್ಮಿಕೊಂಡಿದ್ದು, ಒಂದು ದಿನ, ಒಂದು ಗಂಟೆ, ಎಲ್ಲರೂ ಒಟ್ಟಿಗೆ ಸೇರಿ ಶ್ರಮದಾನ ಮಾಡುವ ಮುಖಾಂತರ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸ್ವಚ್ಚತಾ ಕಾರ್ಯದಲ್ಲಿ ಎಲ್ಲರೂ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಹಾಯಕ ಲೆಕ್ಕಾಧಿಕಾರಿಗಳಾದ ರಾಮಾಂಜನಪ್ಪ, ವ್ಯವಸ್ಥಾಪಕರಾದ ಶ್ರೀನಿವಾಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸ್ ಮೂರ್ತಿ, ನರಸಿಂಹ ಮೂರ್ತಿ, ಶ್ರೀನಿವಾಸ್, ಸತ್ಯ ಪ್ರಸಾದ್, ಸೇರಿದಂತೆ ನರೇಗಾ ಸಿಬ್ಬಂದಿ, NRLM ಹಾಗೂ ಸ್ವ-ಸಹಾಯ ಸಂಘದವರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಗ್ರಾಮಸ್ಥರು ಸೇರಿದಂತೆ ಹಲವರು ಹಾಜರಿದ್ದರು.

