ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮ ಪಂಚಾಯತಿಯಲ್ಲಿ ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ NRLM ಯೋಜನೆಯಡಿ ಸುಮಾರು 11 ಲಕ್ಷ ಅವ್ಯವಹಾರವಾಗಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಜಿ.ವಿ.ಗಂಗಪ್ಪ, ಗ್ರಾಮೀಣ ಭಾಗದ ಬಡ ಮಹಿಳೆಯರಿಗೆ ಅನುಕೂಲವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ NRLM ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಅದನ್ನು ಸಮರ್ಪಕವಾಗಿ ನಿಭಾಯಿಸಲು ಹೊರಗುತ್ತಿಗೆ ಮೂಲಕ ಸಿಬ್ಬಂದಿಯನ್ನು ಸಹ ನೇಮಕ ಮಾಡಿದೆ. ಆದರೆ ಕಳೆದ 2018 ರಿಂದ ತಾಲೂಕಿನಾದ್ಯಂತ ಈ ಯೋಜನೆಯಡಿ ಲಕ್ಷಾಂತರ ಹಣ ದುರುಪಯೋಗವಾಗಿದೆ. ದಪ್ಪರ್ತಿ ಪಂಚಾಯತಿ ಒಂದರಲ್ಲೇ ಬರೊಬ್ಬರಿ 11 ಲಕ್ಷ ಹಣ ದುರುಪಯೋಗವಾಗಿದೆ ಎಂಬ ದೂರು ಕೇಳಿಬಂದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲೂ ದೂರು ನೀಡಲಾಗಿದೆ. ಸರ್ಕಾರಗಳಿಂದ ಬರುವಂತಹ ಇಂತಹ ಯೋಜನೆಗಳು ಸಮರ್ಪಕವಾಗಿ ಜಾರಿಯಾದರೇ ಗುಡಿಬಂಡೆ ತಾಲೂಕು ಅಭಿವೃದ್ದಿಯಾಗುತ್ತದೆ. ಆದರೆ ಅನುದಾನ, ಯೋಜನೆಗಳ ದುರ್ಬಳಕೆಯಿಂದಾಗಿ ಗುಡಿಬಂಡೆ ಮತಷ್ಟು ಹಿಂದುಳಿಯುತ್ತಿದೆ. ಆದ್ದರಿಂದ ಕೂಡಲೇ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಒಂದು ವಾರದೊಳಗೆ ಈ ಕೆಲಸ ಆಗದೇ ಇದ್ದರೇ ಜಿಲ್ಲೆಯ ಮಟ್ಟದಲ್ಲಿ ಉಗ್ರ ಹೋರಾಟ ರೂಪಿಸಲಾಗುತ್ತದೆ. ನಾವು ಈ ಸಂಬಂಧ ಮನವಿ ನೀಡಲು ಬಂದಿದ್ದರೇ ಕಚೇರಿಯಲ್ಲಿ ಹೊರಗುತ್ತಿಗೆ ನೌಕರರು ಬಿಟ್ಟರೇ ಬೇರೆ ಯಾರೂ ಇಲ್ಲ. ಸರ್ಕಾರಿ ನೌಕರರು ತಪ್ಪು ಮಾಡಿದರೇ ಶಿಕ್ಷೆಗೆ ಗುರಿಪಡಿಸಬಹುದು ಆದರೆ ಹೊರಗುತ್ತಿಗೆ ನೌಕರರ ಮೇಲೆ ಯಾವ ರೀತಿಯ ಕ್ರಮ ತೆಗೆದುಕೊಳ್ಳಲು ಸಾಧ್ಯ ಎಂದು ಆಕ್ರೋಷ ಹೊರಹಾಕಿದರು.
ಬಳಿಕ ದಲಿತ ಮುಖಂಡ ಆದಿನಾರಾಯಣಪ್ಪ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕವಾಗಿ ಮುಂದೆ ಬರಲು ಸಹಾಯಧನ, ಸಬ್ಸಿಡಿ ಸಾಲದ ರೂಪದಲ್ಲಿ ಹಣಕಾಸು ನೆರವು ಒದಗಿಸಲು NRLM ಯೋಜನೆ ಅನುಷ್ಟಾನಗೊಳಿಸಲಾಗಿದೆ. ಆದರೆ ಮಹಿಳಾ ಸಂಘಗಳನ್ನು ಅಭಿವೃದ್ದಿ ಪಡಿಸುವ ಬದಲಿಗೆ ಇಲ್ಲಿ ಆಗಿರೋದು ಬೇರೆ. ಮಾಹಿತಿಗಳ ಪ್ರಕಾರ ದಪ್ಪರ್ತಿ ಗ್ರಾ.ಪಂ. ವ್ತಾಪ್ತಿಯಲ್ಲಿ ಒಂದೇ ಸಂಘಕ್ಕೆ ಎಂಟು ಬಾರಿ ಸಾಲ ನೀಡಲಾಗಿದೆ. ಆದರೆ ನಿಯಮಗಳ ಪ್ರಕಾರ ಒಂದು ಸಂಘಕ್ಕೆ ಸಾಲ ನೀಡಿದರೇ ಬಳಿಕ ಬೇರೆ ಸಂಘಕ್ಕೆ ನೀಡಬೇಕು. ಇದು ದಪ್ಪರ್ತಿ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿಲ್ಲ. ಜೊತೆಗೆ ತಾಲೂಕು ಸಂಯೋಜಕರು ಸಹ ಈ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ದೂರು ಕೇಳಿಬಂದಿದೆ. ಆದ್ದರಿಂದ ಸಂಬಂಧಪಟ್ಟವರನ್ನು ತನಿಖೆಗೆ ಒಳಪಡಿಸಿ ಬಡವರಿಗೆ ಸಿಗಬೇಕಾದ ಹಣವನ್ನು ವಸೂಲಿ ಮಾಡಬೇಕು ಎಂದರು.
ತಾಲೂಕು ಪಂಚಾಯತಿ ಕಚೇರಿಯಲ್ಲಿ ಯಾರೂ ಅಧಿಕಾರಿಗಳು ಇಲ್ಲದ ಕಾರಣ ಟಪಾಲಿನಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು. ಪ್ರತಿಭಟನಾಕಾರರು ಈ ವೇಳೆ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಇಸ್ಕೂಲಪ್ಪ, ಕೆ.ಎಸ್.ನರಸಿಂಹಪ್ಪ, ಆದಿನಾರಾಯಣಪ್ಪ ಸೇರಿದೆಂತೆ ಹಲವರು ಹಾಜರಿದ್ದರು.