Local News – ಗುಡಿಬಂಡೆ ತಾಲೂಕಿನ ಹೈನುಗಾರಿಕೆಯಲ್ಲಿ ತೊಡಗಿರುವ ಎಲ್ಲ ರೈತರು ತಮ್ಮ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಿಸುವ ಮೂಲಕ ರೋಗವನ್ನು ಭಾರತದಿಂದ ನಿರ್ಮೂಲನೆ ಮಾಡಲು ಸಹಕರಿಸಬೇಕು ಎಂದು ಕೋಚಿಮುಲ್ ನಿರ್ದೇಶಕ ಆದಿನಾರಾಯಣರೆಡ್ಡಿ ರೈತರಿಗೆ ಸಲಹೆ ನೀಡಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಸಹಯೋಗದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ದಿನ್ನಮೇಲಿನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ 6ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಗೋಪೂಜೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ತಾಲ್ಲೂಕಿನ ಎಲ್ಲಾ ರೈತರು ನಿಮ್ಮ ಜಾನುವಾರುಗಳಿಗೆ ಲಸಿಕೆಯನ್ನು ಶೆ 100ರಷ್ಟು ಹಾಕಿಸಿ. ಹಸು, ಎತ್ತು, ಎಮ್ಮೆ, ಹೋರಿ ಹಾಗೂ ಹಂದಿಗಳಲ್ಲಿ ಕಂಡು ಬರುತ್ತಿರುವ ಮಾರಕ ರೋಗ ಕಾಲುಬಾಯಿ ರೋಗದಿಂದ ಆರ್ಥಿಕವಾಗಿ ಸಂಕಷ್ಟ ಎದುರಿಸಬೇಕಾಗುತ್ತದೆ. ಹಾಗಾಗಿ ತಾಲೂಕಿನ ರೈತರು ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಮುಂದಾಗಬೇಕು. ಆ ಮೂಲಕ ಸರ್ಕಾರದ ಯೋಜನೆ ಪರಿಪೂರ್ಣವಾಗಲು ಸಹಕರಿಸಬೇಕು ಎಂದರು.
ಪಶುವೈದ್ಯ ಸೇವಾ ಇಲಾಖೆಯ ಸಹಾಯ ನಿರ್ದೇಶಕ ಡಾ.ಸುಬ್ರಮಣ್ಯ ಮಾತನಾಡಿ ಈ ರೋಗಕ್ಕೆ ತುತ್ತಾದ ಹಸುಗಳಿಗೆ ವಿವಿಧ ಸಮಸ್ಯೆಗಳು ಎದುರಾಗುತ್ತವೆ. ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಉತ್ಪಾದನಾ ಸಾಮರ್ಥ್ಯ ನಷ್ಟ ಹಾಗೂ ಹಾಲಿನ ಇಳುವರಿಯೂ ಗಣನೀಯವಾಗಿ ಇಳಿಕೆಯಾಗುವ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ರೈತರು ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಕೋಚಿಮುಲ್ ಉಪ ವ್ಯವಸ್ಥಾಪಕಿ ಡಾ. ನವ್ಯ, ಸೋಮೇನಹಳ್ಳಿಯ ಪಶುವೈದ್ಯ ಡಾ. ರವಿಚಂದ್ರ ಸಿಬ್ಬಂದಿ ಶಿರೀಷ, ಬೀರಪ್ಪ, ಗೌರಿ ಸೇರಿದಂತೆ ಇತರರಿದ್ದರು.