ಚಿಕ್ಕಬಳ್ಳಾಫುರ ಜಿಲ್ಲೆ ಗುಡಿಬಂಡೆ ಬೆಟ್ಟದ ತಪ್ಪಲಿನಲ್ಲಿ ಗಾಯತ್ರಿ ದೇಗುಲ ಸಮಿತಿ ಮೂಲಕ ದಾನಿಗಳು ಹಾಗೂ ಸಾರ್ವಜನಿಕರ ನೆರವಿನಿಂದ ನಿರ್ಮಾಣಗೊಳ್ಳುತ್ತಿರುವ ಸರ್ವಧರ್ಮ (Local News) ಸಮನ್ವಯ ಗಾಯತ್ರಿ ವಿಶ್ವಧ್ಯಾನ ಮಂದಿರ ನಿರ್ಮಾಣ ಕಾಮಗಾರಿ ವೀಕ್ಷಣೆಗೆ ಬುಧವಾರ ಆಗಮಿಸಿದ್ದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಾಮಗಾರಿ ಪ್ರಗತಿ ಕಂಡು ತೃಪ್ತಿವ್ಯಕ್ತಪಡಿಸಿದರು.
ವಿಶ್ವಕ್ಕೆ ಮಾದರಿ ಎನಿಸಬಹುದಾದ ಕಾರ್ಯಯೋಜನೆಗಳು ಸಾಮರಸ್ಯ ಸಮಾಜ ನಿರ್ಮಾಣದ ಸಲುವಾಗಿ ಇಲ್ಲಿ ನೆರವೇರುತ್ತಿರುವುದು ತಮಗೆ ಅತೀವ ಸಂತೋಷವಾಗಿದೆ. ಈ ವರ್ಷದ ಡಿಸೆಂಬರ್ ಮಾಹೆಯ ವೇಳೆಗೆ ಮೊದಲ ಹಂತದ ವೇದವಿಜ್ಞಾನ ಪಾಠಶಾಲೆ, ಸರ್ವಧರ್ಮ ಧ್ಯಾನಮಂದಿರ, ಆಧುನಿಕ ಸೌಲಭ್ಯವುಳ್ಳ ಶೌಚಾಲಯಗಳ ಕಾಮಗಾರಿಗಳು ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಜನುಪಯೋಗಿ ಸೇವೆಗಾಗಿ ಲೋಕಾರ್ಪಣೆ ಮಾಡಲಾಗುವುದು. ಫ್ಲೋರೈಡ್ ರಹಿತ ನೀರು ಸಂಗ್ರಹಣೆ ಹಾಗೂ ಸಾರ್ವಜನಿಕರಿಗೆ ಪೂರೈಕೆ ಮಾಡುವ ಮಳೆನೀರು ಕೊಯ್ಲು ಪದ್ಧತಿಯ ಭಾಗವಾದ ಪುರಾತನ ಕಲ್ಯಾಣಿ ಪುನಶ್ಚೇತನಗೊಳಿಸುವ ಮಹತ್ವದ ಯೋಜನೆಯ ಕಾಮಗಾರಿ ಸಹಾ ನಿರಂತರವಾಗಿ ಪ್ರಗತಿಯಲ್ಲಿರುವುದು ಮಹತ್ತರ ಬೆಳವಣಿಗೆಯಾಗಿದೆ. ಈ ಯೋಜನೆಗಳ ಕಾರ್ಯಾನುಷ್ಟಾನಕ್ಕಾಗಿ ಅಗತ್ಯ ಸಹಕಾರ ಹಾಗೂ ಅನುದಾನ ಒದಗಿಸಿಕೊಡುವ ಜವಾಬ್ಧಾರಿ ತಮ್ಮ ಮೇಲಿದ್ದು, ಶೀಘ್ರದಲ್ಲಿಯೇ ನೀಡುವುದಾಗಿ ತಿಳಿಸಿದರು.
ಮಕ್ಕಳ ಉದ್ಯಾನವನ , ರಾಕ್‌ಗಾರ್ಡನ್ ನಿರ್ಮಾಣ ಹಾಗೂ ಬೆಟ್ಟದ ತಪ್ಪಲು ತಲುಪುವ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಅಗತ್ಯ ಸಮೀಕ್ಷೆ ನಡೆಸಿ ತುರ್ತು ವರದಿ ಸಲ್ಲಿಸುವಂತೆ ಸ್ಥಳದಲ್ಲಿದ್ದ ತಹಶೀಲ್ದಾರರಿಗೆ ಶಾಸಕರು ಸೂಚನೆ ನೀಡಿದರು. ತಕ್ಷಣಾ ಸ್ಪಂದಿಸಿದ ತಹಶೀಲ್ದಾರರು ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ನಿರ್ದೇಶನ ನೀಡಿದರು. ಈ ವೇಳೆ ತಹಶೀಲ್ದಾರ್ ಸಿಗ್ಬತುಲ್ಲಾ, ಗಾಯತ್ರಿ ದೇಗುಲ ಸಮಿತಿ ಪ್ರಧಾನ ಸಂಚಾಲಕ ಸ.ನ.ನಾಗೇಂದ್ರ, ಸಂಚಾಲಕರಾದ ವಾಹಿನಿ ಸುರೇಶ್, ಮ.ನಾ.ಮಂಜುನಾಥ್, ಅನೂಷಾ ನಾಗರಾಜ್, ಮುಖಂಡರಾದ ಎಂ.ಜಿ.ಶಿವರಾಂ, ಸಿ.ಎ.ಚಲಪತಿ, ರಘುನಾಥರೆಡ್ಡಿ, ಪಪಂ ಮಾಜಿ ಅಧ್ಯಕ್ಷ ರಿಯಾಜ್ ಪಾಷಾ ಹಾಜರಿದ್ದರು.