Local News : ಶಿಕ್ಷಣ, ಆರೋಗ್ಯದಲ್ಲಿ ರಾಜಿ ಇಲ್ಲ: ಕರ್ತವ್ಯಲೋಪ ಎಸಗುವ ಶಿಕ್ಷಕರಿಗೆ ಶಾಸಕ ಸುಬ್ಬಾರೆಡ್ಡಿ ಖಡಕ್ ಎಚ್ಚರಿಕೆ..!

Local News – ಸರ್ಕಾರಿ ಶಾಲೆಗಳ ಕೆಲವು ಶಿಕ್ಷಕರು ಶಾಲೆ ಆರಂಭದ ಸಮಯ ಮುಗಿದರೂ ಕೂಡ ಇನ್ನೂ ಕರ್ತವ್ಯಕ್ಕೆ ಹಾಜರಾಗದೇ ಇರುವುದರ ಬಗ್ಗೆ ದೂರುಗಳು ಬರುತ್ತಿವೆ, ನಾನು ಶಿಕ್ಷಣ ಹಾಗೂ ಆರೋಗ್ಯದ ವಿಚಾರದಲ್ಲಿ ರಾಜಿಯಾಗುವ ಮಾತೇ ಇಲ್ಲ. ಕರ್ತವ್ಯ ಲೋಪ ಎಸಗುವಂತಹ ಶಿಕ್ಷಕರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಸುಬ್ಬಾರೆಡ್ಡಿ ಎಚ್ಚರಿಕೆ ನೀಡಿದರು.

MLA Subbareddy warning teachers about absenteeism at Gudibande Taluk Panchayat meeting - Local News

Local News – ಶಿಕ್ಷಣ, ಆರೋಗ್ಯ ವಿಚಾರದಲ್ಲಿ ರಾಜಿ ಇಲ್ಲ : ಶಾಸಕ

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಾಸಕ ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಅವರು, ಇತ್ತೀಚಿಗೆ ಸರ್ಕಾರಿ ಶಾಲೆಗಳ ಕೆಲವು ಶಿಕ್ಷಕರು ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿದೆ. ಅದರಲ್ಲೂ ಇತ್ತೀಚಿಗೆ ಜಾತ್ರೆ ಅಥವಾ ಬಾಡೂಟದಂತಹ ಕಾರ್ಯಕ್ರಮಗಳಿದ್ದರೇ ಸಾಕು ಶಾಲೆಗಳಲ್ಲಿನ ಶಿಕ್ಷಕರು ಶಾಲೆಗೆ ಚಕ್ಕರ್‍ ಹೊಡೆದು ಆ ಕಾರ್ಯಕ್ರಮಗಳಲ್ಲಿ ಹಾಜರಾಗುತ್ತಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾನೆ ತೊಂದರೆಯಾಗುತ್ತಿದೆ. ನಾನು ಶಿಕ್ಷಣ ಕ್ಷೇತ್ರ ಅಥವಾ ಆರೋಗ್ಯ ಕ್ಷೇತ್ರದಲ್ಲಿ ಈ ರೀತಿಯ ಲೋಪದೋಷಗಳು ಕಂಡು ಬಂದರೇ ಖಂಡಿತ ಕ್ಷಮಿಸುವುದಿಲ್ಲ. ಇನ್ನು ಮುಂದೆ ಈ ರೀತಿಯಾಗಿ ನಡೆದುಕೊಳ್ಳುವಂತಹ ಶಿಕ್ಷಕರಿಗೆ ಬಿಇಒ ಅಥವಾ ತಾಲೂಕು ಮಟ್ಟದ ಅಧಿಕಾರಿಗಳು ನೊಟೀಸ್ ನೀಡಬೇಕು. ಇಲ್ಲವಾದಲ್ಲಿ ನಾನೇ ನೇರವಾಗಿ ಅಂತಹ ಶಿಕ್ಷಕರ ವಿರುದ್ದ ಕಾನೂನು ರೀತಿಯ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದರು.

Local News – ಸರ್ಕಾರಿ ಭೂಮಿ ಕಬಳಿಕೆ

ಇನ್ನೂ ತಾಲೂಕಿನ ಹಲವು ಕಡೆ ಕೆಲ ಖಾಸಗಿ ವ್ಯಕ್ತಿಗಳು ಸರ್ಕಾರಿ ಭೂಮಿಗೆ ಬೇಲಿ ಹಾಕಿಕೊಂಡು ಲೇಔಟ್ ಮಾದರಿಗಳಲ್ಲಿ ಜಮೀನು ದುರಸ್ಥಿ ಮಾಡಿದ್ದಾರೆ ಎಂಬ ದೂರುಗಳು ಕೇಳಿಬಂದಿದೆ. ಅದರಲ್ಲೂ ಕೆಲವರು 10 ಎಕರೆಗೂ ಅಧಿಕ ಜಮೀನನ್ನು ಕಬಳಿಸಿಕೊಂಡು ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ತಹಸೀಲ್ದಾರ್‍ ರವರು ಕೂಡಲೇ ಆ ಜಾಗಕ್ಕೆ ತೆರಳಿ ಯಾವುದೇ ಮುಲಾಜಿಲ್ಲದೇ ತೆರವು ಮಾಡಿಸಬೇಕು. ಜೊತೆಗೆ ಕೆಲ ರಿಯಲ್ ಎಸ್ಟೇಟ್ ಮಾಲೀಕರು ಬಡವರಿಂದ ಕಡಿಮೆ ಹಣಕ್ಕೆ ಜಮೀನು ಖರೀದಿಸಿ, ಅವರ ಮಾಹಿತಿಗೆ ಇಲ್ಲದಂತೆ ಆ ಸ.ನಂ ನಲ್ಲಿರುವ ಖರಾಬು ಜಮೀನನ್ನೂ ಸಹ ಅವರ ಹೆಸರಿಗೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಸಂಪೂರ್ಣ ಮಾಹಿತಿ ನೀಡಬೇಕೆಂದು ತಹಸೀಲ್ದಾರ್‍ ರವರಿಗೆ ಸೂಚನೆ ನೀಡಿದರು.

Local News – ಶೀಘ್ರ ನಿವೇಶನಗಳನ್ನು ನೀಡಲು ಕ್ರಮ ವಹಿಸಿ

ಬಳಿಕ ತಾಲೂಕು ಪಂಚಾಯತಿ ಅಧಿಕಾರಿಗಳಿಂದ ಇಲಾಖೆಯ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ತಾಲೂಕು ಪಂಚಾಯತ್ ಇ.ಒ ರವರಿಗೆ ತಾಲೂಕಿನಾದ್ಯಂತ ನಿವೇಶನ ರಹಿತರರಿಗೆ ಸರ್ಕಾರದಿಂದ ನಿವೇಶನ ನೀಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆದಷ್ಟು ಶೀಘ್ರವಾಗಿ ಗುಡಿಬಂಡೆ ತಾಲೂಕಿನಲ್ಲಿ ಪ್ರತಿಯೊಬ್ಬರಿಗೂ ನಿವೇಶನ ಕೊಡಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

MLA Subbareddy warning teachers about absenteeism at Gudibande Taluk Panchayat meeting - Local News

Local News – 750 ನಿವೇಶನಗಳ ಹಂಚಿಕೆಗೆ ಸಿದ್ಧತೆ

ಈ ಸಮಯದಲ್ಲಿ ತಾ.ಪಂ ಇಒ ನಾಗಮಣಿ ಮಾಹಿತಿ ನೀಡಿ ಈಗಾಗಲೇ ತಾಲೂಕಿನಲ್ಲಿ 750 ನಿವೇಶನಗಳನ್ನು ಮಂಜೂರು ಮಾಡಲು ಸಿದ್ದಪಡಿಸುತ್ತಿದ್ದು, 625 ಫಲಾನುಭವಿಗಳ ಪಟ್ಟಿ ಸಿದ್ದವಾಗಿದೆ. ಉಳಿಕೆ ಇರುವ 125 ನಿವೇಶನಗಳನ್ನು ಸಹ ಬೇಗ ಸಿದ್ದಪಡಿಸುತ್ತೇವೆಂದು ತಿಳಿಸಿದರು. ಇನ್ನು ಅನೇಕ ಗ್ರಾಮಗಳಲ್ಲಿ ಚರಂಡಿಗಳ ಸ್ವಚ್ಚತೆ ಮಾಡುತ್ತಿಲ್ಲ ಎಂದು ದೂರುಗಳು ಬಂದಿವೆ, ಚರಂಡಿ ಸ್ವಚ್ಚತೆ ಮಾಡಿಸುತ್ತೇವೆಂದು ಗ್ರಾಮದ ಸದಸ್ಯರುಅನುದಾನ ಬಿಡುಗಡೆ ಮಾಡಿಸಿಕೊಂಡು ಚರಂಡಿಗಳನ್ನು ಸ್ವಚ್ಚತೆ ಮಾಡುತ್ತಿಲ್ಲ, ಕೂಡಲೇ ಅವುಗಳನ್ನು ಪರಿಶೀಲಿಸಿ ಚರಂಡಿಗಳನ್ನು ಸ್ವಚ್ಚತೆ ಮಾಡಿಸುವಂತೆ ತಾ.ಪಂ ಇಒ ರವರಿಗೆ ಶಾಸಕರು ಸೂಚಿಸಿದರು.

Local News – ಜನರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಿ

ಇನ್ನೂ ಕೃಷಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ  ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಿ, ಎಲ್ಲಾ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಬೇಕು. ನಿಮಗೆ ಏನಾದರೂ ಸಮಸ್ಯೆಯಿದ್ದರೇ ನನಗೆ ತಿಳಿಸಿ ಬಗೆಹರಿಸುವ ಕೆಲಸ ಮಾಡುತ್ತೇನೆ. ಜನರ ಕೆಲಸ ಮಾಡಿಕೊಡಲು ಏನಾದರೂ ವಿಳಂಭ ಅಥವಾ ನಿರ್ಲಕ್ಷ್ಯ ತೋರಿದರೇ ಅಂತಹ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.

Read this also : Local News : ಸಮರ್ಪಕ ಸಾರಿಗೆ ವ್ಯವಸ್ಥೆ ಹಾಗೂ ಬಸ್ ಡಿಪೋ ನಿರ್ಮಾಣಕ್ಕಾಗಿ ಆಗ್ರಹಿಸಿ ಜು.26 ರಸ್ತೆ ತಡೆ ನಡೆಸಿ ಪ್ರತಿಭಟನೆ

ಈ ವೇಳೆ ತಹಶೀಲ್ದಾರ್ ಸಿಗ್ಬತ್‍ವುಲ್ಲಾ, ಇಒ ನಾಗಮಣಿ, ನಾಮನಿರ್ದೇಶಿತ ಸದಸ್ಯರಾದ ಬೈರಾರೆಡ್ಡಿ, ಲಕ್ಷ್ಮೀನಾರಾಯಣ, ಗಂಗರಾಜು, ರಿಯಾಜ್‍ಪಾಷ, ಗುರುಮೂರ್ತಿ, ಇಂದಿರಾ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Leave a Comment

Your email address will not be published. Required fields are marked *

Scroll to Top