ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಅ.21 ರ ರಾತ್ರಿ ಬಿದ್ದ ಭಾರಿ ಮಳೆಗೆ ಕೆರೆ ಕುಂಟೆಗಳು ತುಂಬಿದ್ದು, ಗುಡಿಬಂಡೆ ಹೊರವಲಯದ ಐತಿಹಾಸಿಕ ಹಿನ್ನೆಲೆಯ ಅಮಾನಿ ಬೈರಸಾಗರ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಶಾಸಕ ಸುಬ್ಬಾರೆಡ್ಡಿ ಕುಟುಂಬ ಸಮೇತ ಆಗಮಿಸಿ ಬಾಗೀನ ಅರ್ಪಿಸಿದರು. ಈ ವೇಳೆ ಗುಡಿಬಂಡೆ ಕೆರೆ ಕೋಡಿಯ ಮೇಲ್ಸುತುವೆ ನಿರ್ಮಾಣ ಮಾಡಲು ಮತ್ತೊಮ್ಮೆ ಸರ್ಕಾರಕ್ಕೆ ಪ್ರಸ್ತಾವನೆ (Local News) ಸಲ್ಲಿಸುತ್ತೇನೆ ಎಂದು ಶಾಸಕ ಸುಬ್ಬಾರೆಡ್ಡಿ ರವರು ಮಾದ್ಯಮಗಳಿಗೆ ತಿಳಿಸಿದರು.
ಕಳೆದ 2022 ನೇ ವರ್ಷದಲ್ಲೂ ಸಹ ಇದೇ ರೀತಿಯ ಮಳೆಯಾಗಿ ಗುಡಿಬಂಡೆ ತಾಲೂಕು ಸುಮಾರು ಒಂದು ತಿಂಗಳಕ್ಕೂ ಹೆಚ್ಚಿನ ಕಾಲ ಕೋಡಿ ಹರಿದು ಜನ ಜೀವನ ಅಸ್ತವ್ಯಸ್ಥಗೊಂಡಿತ್ತು. ಆ ಸಮಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. ನಾನು ಗುಡಿಬಂಡೆ ಕೆರೆ ಕೋಡಿಯ ಬಳಿ ಮೇಲ್ಸುತುವೆ ನಿರ್ಮಾಣ ಮಾಡಲು ಬಿಜೆಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ. ಕೆಲವೊಂದು ಕಾರಣಗಳಿಂದ ಪ್ರಸ್ತಾವನೆ ಮಂಜೂರಾಗಿಲ್ಲ. ಇದೀಗ ನಮ್ಮದೇ ಸರ್ಕಾರವಿದ್ದು, ಮತ್ತೊಮ್ಮೆ ಮೇಲ್ಸುತುವೆ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸುತ್ತೇನೆ. ಜೊತೆಗೆ ಪ್ರಸ್ತಾವನೆಯನ್ನು ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜನರಿಗೆ ಸಮಸ್ಯೆಯಾಗದಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.
ಕೆರೆ ನೀರು ರೈತರ ಜಮೀನುಗಳಿಗೆ ನೀಡಲು ಕ್ರಮ: ಇನ್ನೂ ಕೆರೆ ತುಂಬಿ ಕೋಡಿ ಹರಿದರೇ ಆ ನೀರು ಆಂದ್ರಪ್ರದೇಶಕ್ಕೆ ಸೇರುತ್ತದೆ. ಕಳೆದ ಬಾರಿ ಕೆರೆಯ ನೀರನ್ನು ಕುಡಿಯಲು ಜಿಲ್ಲಾಡಳಿತದಿಂದ ಮೀಸಲು ಇಡಲಾಗಿತ್ತು. ಇದೀಗ ಕೆರೆ ತುಂಬಿ ಹರಿಯುತ್ತಿದ್ದು, ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಆ ನೀರನ್ನು ಕೆರೆಯ ಅಚ್ಚುಕಟ್ಟು ವ್ಯಾಪ್ತಿಯ ರೈತರು ಬೆಳೆ ಬೆಳೆಯಲು ಅನುಕೂಲವಾಗುವಂತೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.
ಇನ್ನೂ ಪಟ್ಟಣ ಪಂಚಾಯತಿ ಹಿಂಭಾಗ 3-4 ನೇ ವಾರ್ಡ್‌ಗಳ ವ್ಯಾಪ್ತಿಯ ರಾಜಕಾಲುವೆ ಮಳೆ ಬಂದರೇ ತುಂಬಿ ಹರಿಯುತ್ತದೆ. ಇದರಿಂದಾಗಿ ರಾಜಕಾಲುವೆ ಪಕ್ಕದ ಮನೆಗಳ ಒಳಗೆ ನೀರು ನುಗ್ಗಿ ಜನರಿಗೆ ಸಮಸ್ಯೆಯಾಗಿದೆ ಶಾಸಕರು ತಮ್ಮ ವಿಶೇಷ ಅನುದಾನದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲು ಸಹಕರಿಸಬೇಕೆಂದು ಪ.ಪಂ. ಅಧ್ಯಕ್ಷ ವಿಕಾಸ್ ಮನವಿ ಮಾಡಿದರು. ಮನವಿಗೆ ಸ್ಪಂಧಿಸಿದ ಶಾಸಕ ಸುಬ್ಬಾರೆಡ್ಡಿ ಆದಷ್ಟು ಶೀಘ್ರವಾಗಿ ವಿಶೇಷ ಅನುದಾನ ತಂದು ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ತಹಸಿಲ್ದಾರ್ ಸಿಗ್ಬತ್ತುಲ್ಲಾ, ಸರ್ಕಲ್ ಇನ್ಸ್ ಪೆಕ್ಟರ್ ನಯಾಜ್, ಸಣ್ಣ ನೀರಾವರಿ ಇಲಾಖೆಯ ಸುನೀಲ್, ಲೋಕೋಪಯೋಗಿ ಇಲಾಖೆಯ ಪ್ರದೀಪ್, ಪೂಜಪ್ಪ, ಪ.ಪಂ. ಮುಖ್ಯಾಧಿಕಾರಿ ಶ್ರೀನಿವಾಸ್, ಪ.ಪಂ ಸದಸ್ಯರು, ಮುಖಂಡರು ಸೇರಿದಂತೆ ಹಲವರು ಹಾಜರಿದ್ದರು.