Local News- ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಮದ ಗೌರಿಬಿದನೂರು ತಾಲೂಕು ಗಡಿಯಿಂದ ಕಡೇಹಳ್ಳಿ ಗ್ರಾಮದ ವರೆಗೆ ಸುಮಾರು 11 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಸುಬ್ಬಾರೆಡ್ಡಿ ಭೂಮಿ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕ ಸುಬ್ಬಾರೆಡ್ಡಿ, ಗೌರಿಬಿದನೂರು ತಾಲೂಕು ಗಡಿಯಿಂದ ಕಡೇಹಳ್ಳಿ ಗ್ರಾಮದವರೆಗೆ ರಸ್ತೆ ತುಂಬಾ ಹಾಳಾಗಿತ್ತು. ಈ ನಿಟ್ಟಿನಲ್ಲಿ ಸ್ಥಳೀಯರು ಸುಮಾರು ದಿನಗಳಿಂದ ಜನರು ರಸ್ತೆ ಅಭಿವೃದ್ದಿಗೆ ಮನವಿ ಮಾಡಿದ್ದರು. ಅದರಂತೆ ನಮ್ಮ ಸರ್ಕಾರ ಸುಮಾರು 11 ಕೋಟಿ ಅನುದಾನ ನೀಡಿದ್ದು, ಈ ಅನುದಾನದಲ್ಲಿ ಉತ್ತಮ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತದೆ. ಈ ರಸ್ತೆ ಇದೀಗ 5.5 ಮೀಟರ್ ಇದ್ದು, 7.5 ಮೀಟರ್ ರಸ್ತೆ ಮಾಡಲಾಗುತ್ತದೆ. ಆದ್ದರಿಂದ ಜನರೂ ಸಹ ಸಹಕಾರ ನೀಡಬೇಕು. ಎಲ್ಲೋಡು ಸರ್ಕಲ್ ಸೇರಿದಂತೆ ಹಲವು ಕಡೆ ಬರುವಂತಹ ಸರ್ಕಲ್ ಗಳಲ್ಲಿರುವ ಪೆಟ್ಟಿಗೆ ಅಂಗಡಿಗಳು ಸಹಕಾರ ನೀಡಬೇಕು. ಉತ್ತಮವಾದ ರಸ್ತೆಯನ್ನು ನಿರ್ಮಾಣ ಮಾಡಲು ಎಲ್ಲರೂ ಸಹಕರಿಸಬೇಕು ಎಂದರು.
ಇನ್ನೂ ಇದೇ ಸಮಯದಲ್ಲಿ ಬಿಸಿಎಂ ಹಾಸ್ಟಲ್ ಸ್ಥಳಾಂತರದ ಬಗ್ಗೆ ಮಾತನಾಡಿದ ಶಾಸಕರು, ಗುಡಿಬಂಡೆಯಲ್ಲಿರುವ ಒಂದು ಹಾಸ್ಟಲ್ ನಲ್ಲಿ ಐದು ವರ್ಷದಿಂದ ದಾಖಲಾತಿ ಶೂನ್ಯವಾಗಿದೆ. ಎಲ್ಲಿ ಖಾಲಿ ಹಾಸ್ಟಲ್ ಗಳಿವೆ ಅವುಗಳನ್ನು ಸ್ಥಳಾಂತರ ಮಾಡಲು ಆದೇಶ ಬಂತು. ಈ ಹಿಂದೆ ಐದು ವರ್ಷ ಚಿಕ್ಕಬಳ್ಳಾಪುರದವರು ಈ ಹಾಸ್ಟಲ್ ನ ಸೀಟ್ ಗಳನ್ನು ಬಳಸಿಕೊಂಡಿದ್ದರು. ಇದೀಗ ಖಾಲಿಯಿರುವ ಹಾಸ್ಟಲ್ ಅನ್ನು ನನ್ನ ವಿಧಾನ ಸಭಾ ಕ್ಷೇತ್ರದಲ್ಲಿಯೇ ಸ್ಥಳಾಂತರ ಮಾಡುತ್ತಿದ್ದೇನೆ. ಇದೊಂದು ತಾತ್ಕಲಿಕವಾಗಿದೆ. ನಾನು ಈ ಮನವಿ ಮಾಡದೇ ಇದ್ದರೇ ಬೇರೆ ಜಿಲ್ಲೆಗಳಿಗೆ ಈ ಹಾಸ್ಟಲ್ ಹೋಗುತ್ತಿತ್ತು. ಹಾಸ್ಟಲ್ ಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ತಾತ್ಕಲಿಕ ಸ್ಥಳಾಂತರವಷ್ಟೆ. ಒಂದು ವೇಳೆ ಗುಡಿಬಂಡೆಯಲ್ಲಿ ದಾಖಲಾತಿಯಾದರೇ ಒಂದು ವಾರದಲ್ಲೇ ನಾನು ಹಾಸ್ಟಲ್ ಸ್ಥಳಾಂತರಿಸಲು ಕ್ರಮ ವಹಿಸುತ್ತೇನೆ. ಇದರಲ್ಲಿ ಜನರು ಗೊಂದಲವಾಗುವುದು ಬೇಡ ಎಂದರು.

ಈ ವೇಳೆ ಪಿ.ಡಬ್ಲ್ಯೂಡಿ ಇಲಾಖೆಯ ಪೂಜಪ್ಪ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆದಿರೆಡ್ಡಿ, ಮುಖಂಡರಾದ ರಘುನಾಥರೆಡ್ಡಿ, ಬಾಲಕೃಷ್ಣಾರೆಡ್ಡಿ ಸೇರಿದಂತೆ ಎಲ್ಲೋಡು ಗ್ರಾ.ಪಂ ವ್ಯಾಪ್ತಿಯ ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು.