Local News – ಸರ್ಕಾರದಿಂದ ಜನರಿಗೆ ಅನೇಕ ಸೌಲಭ್ಯಗಳು ಸಿಗಲಿದ್ದು, ಅವುಗಳ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ಹಾಗೂ ಅರ್ಹರಿಗೆ ದೊರಕಿಸಿ ಕೊಡಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕೆಂದು ಶಾಸಕ ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶಾಸಕ ಸುಬ್ಬಾರೆಡ್ಡಿಯವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಇಂದು ಸರ್ಕಾರದಿಂದ ರೈತರು ಹಾಗೂ ಜನಸಾಮಾನ್ಯರಿಗೆ ಅನೇಕ ಸೌಲಭ್ಯಗಳು ಬರುತ್ತಿವೆ. ಆದರೆ ಅವುಗಳ ಮಾಹಿತಿಯ ಕೊರತೆಯಿಂದ ಕೇವಲ ಪ್ರಭಾವಿಗಳು ಹಾಗೂ ದಳ್ಳಾಲಿಗಳ ಪಾಲಾಗುತ್ತಿದೆ. ಇದರಿಂದ ಅರ್ಹರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ ಅಧಿಕಾರಿಗಳು ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು. ನಂತರ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ವ್ಯಾಫ್ತಿಯಲ್ಲಿ ನಿವೇಶನ ರಹಿತರರ ಪಟ್ಟಿ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಒಂದು ತಿಂಗಳ ಒಳಗಾಗಿ ನಿವೇಶನ ರಹಿತರರ ಪಟ್ಟಿ ಸಿದ್ದಪಡಿಸಬೇಕು. ಏನಾದರೂ ಸಮಸ್ಯೆಗಳಿದ್ದರೇ ನನಗೆ ತಿಳಿಸಿ ಅದನ್ನು ನಾವು ಬಗೆಹರಿಸುತ್ತೇವೆ. ನನ್ನ ತಾಲೂಕಿನ ವ್ಯಾಪ್ತಿಯಲ್ಲಿ ಯಾರೂ ನಿವೇಶನವಿಲ್ಲದೇ ಇರಬಾರದು ಈ ನಿಟ್ಟಿನಲ್ಲಿ ಅಧಿಕಾರಿಗಳು ತ್ವರಿತ ಗತಿಯಲ್ಲಿ ಕೆಲಸ ಮಾಡಬೇಕೆಂದು ತಾ.ಪಂ. ಇ.ಒ ನಾಗಮಣಿ ಹಾಗೂ ಪಿಡಿಒ ಗಳಿಗೆ ಸೂಚನೆ ನೀಡಿದರು.
ನಂತರ ಸಾಮಾಜಿಕ ಹಾಗೂ ವಲಯ ಅರಣ್ಯ ಇಲಾಖೆಗಳ ಪ್ರಗತಿಯನ್ನು ಪರಿಶೀಲನೆ ಮಾಡಿ, ನೀವು ರಸ್ತೆಯ ಬದಿಯಲ್ಲಿ ಗಿಡಗಳನ್ನು ಹಾಕುವಾಗ ಸರಿಯಾಗಿ ಕೆಲಸ ಮಾಡಬೇಕು. ವಿದ್ಯುತ್ ತಂತಿಗಳು ಹಾದು ಹೋಗಿರುವ ಕಡೆ ಹಾಕಿದರೇ ಮತ್ತೆ ಅವುಗಳನ್ನು ಕಟಾವು ಮಾಡಬೇಕಾಗುತ್ತದೆ. ರಸ್ತೆ ಪಕ್ಕದಲ್ಲಿ ಹಾಕಿದರೇ ರಸ್ತೆ ಕಾಮಗಾರಿ ನಡೆಯುವಾಗ ಸಮಸ್ಯೆಯಾಗುತ್ತದೆ. ಇದರಿಂದಾಗಿ ನೀವು ಸಸಿಗಳನ್ನು ಹಾಕಿದ್ದು ವ್ಯರ್ಥವಾಗುತ್ತದೆ. ಶಾಲಾ ಆವರಣ, ಕಾಲೇಜುಗಳ ಬಳಿ ಸೇರಿದಂತೆ ಸರ್ಕಾರದ ಜಾಗದಲ್ಲಿ ಸಸಿಗಳನ್ನು ನೆಟ್ಟಾಗ ಅನುಕೂಲವಾಗುತ್ತದೆ. ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಂಡಿದ್ದರೇ ಅಂತಹವರ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ದಬ್ಬಾಳಿಕೆ ಮಾಡಬಾರದು ಎಂದು ತಿಳಿಸಿದ್ದು, ಅರಣ್ಯ ಇಲಾಖೆಯವರು ಯಾವುದೇ ಕಾರಣಕ್ಕೂ ರೈತರ ಮೇಲೆ ಬೀಳಬಾರದು ಎಂದರು.
ಇನ್ನೂ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆ ಒಳ್ಳೆಯ ಹೆಸರು ಮಾಡಿದೆ. ಆದರೆ ಇತ್ತೀಚಿಗೆ ಅಲ್ಲಿ ರಾಜಕೀಯ ಹೆಚ್ಚಾಗಿದ್ದು, ಆಸ್ಪತ್ರೆಯ ಹೆಸರು ಹಾಳಾಗುತ್ತಿದೆ. 24 ಗಂಟೆಗಳಿಗೆ ಒಬ್ಬ ವೈದ್ಯರಂತೆ ಕೆಲಸ ಮಾಡುತ್ತಾರೆ. ಆಸ್ಪತ್ರೆಯಲ್ಲಿ 10 ಮಂದಿ ವೈದ್ಯರಿದ್ದರೂ ಈ ರೀತಿಯಲ್ಲಿ ಏಕೆ ಆಗುತ್ತದೆ ಎಂಬುದು ತಿಳಿದಿಲ್ಲ. ಇತ್ತೀಚಿಗಷ್ಟೆ ರಾತ್ರಿ ಸಮಯದಲ್ಲಿ ವೈದ್ಯರ ಸಮಸ್ಯೆಯಿಂದ ಓರ್ವ ಮೃತಪಟ್ಟಿದ್ದ ಎಂಬ ದೂರು ನನಗೂ ಬಂದಿದೆ. ಇನ್ನು ಮುಂದೆ ಈ ರೀತಿಯಲ್ಲಿ ಏನಾದರೂ ಸಮಸ್ಯೆಯಾದರೇ ಅಂತಹ ವೈದ್ಯರು ಕೆಲಸ ಬಿಟ್ಟು ಬೇರೆ ಕಡೆಗೆ ಹೋಗಲಿ. ಇಲ್ಲಿ ಇರೋದು ಬಡವರು ಅವರ ಸೇವೆ ಮಾಡುವ ಉದ್ದೇಶ ಇದ್ದರೇ ಮಾತ್ರ ಇರಲಿ ಇಲ್ಲಾ ಬೇರೆಡೆಗೆ ಹೋಗಲಿ. ಶೀಘ್ರದಲ್ಲೇ ಆರೋಗ್ಯ ರಕ್ಷಾ ಸಮಿತಿಯ ಸಭೆ ನಡೆಸಲಾಗುತ್ತದೆ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.

ತಾಲೂಕಿನ ಹಲವು ರಸ್ತೆಗಳು ಟಿಪ್ಪರ್ ಗಳ ಹಾವಳಿಯಿಂದ ಹಾಳಾಗುತ್ತಿವೆ. ಕ್ವಾರಿ, ಕ್ರಷರ್ ಗಳಲ್ಲಿ ಬ್ಲಾಸ್ಟ್ ಮಾಡುವುದು ಸಹ ಜಾಸ್ತಿಯಾಗಿದೆ. ಇದರಿಂದ ತುಂಬಾನೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ತಹಸೀಲ್ದಾರ್ ರವರು ಕೂಡಲೇ ತಾಲೂಕಿನ ವ್ಯಾಪ್ತಿಯಲ್ಲಿ ಕ್ರಷರ್ ಹಾಗೂ ಕ್ವಾರಿಗಳ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಸೂಚನೆ ನೀಡಿದರು. ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿಯೂ ತಿಳಿಸಿದರು.
ಉಳಿದಂತೆ ಕೃಷಿ, ತೋಟಗಾರಿಕೆ, ಬೆಸ್ಕಾಂ, ಸಮಾಜ ಕಲ್ಯಾಣ, ಬಿಸಿಎಂ, ನೀರಾವರಿ, ಪಿ.ಡ್ಬ್ಲ್ಯೂಡಿ, ಶಿಕ್ಷಣ ಸೇರಿದಂತೆ ಹಲವು ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಇನ್ನೂ ಸಭೆಗೆ ಗೈರಾದ ಮೀನುಗಾರಿಕೆ, ಗಣಿ ಹಾಗೂ ಭೂ ವಿಜ್ಞಾನ ಇಲಾಖೆ, ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆಯ ನೊಟೀಸ್ ನೀಡುವಂತೆ ತಾ.ಪಂ. ಇ.ಒ ನಾಗಮಣಿಯವರಿಗೆ ತಿಳಿಸಿದರು. ಈ ವೇಳೆ ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾ.ಪಂ. ಇ.ಒ ನಾಗಮಣಿ, ಸರ್ಕಲ್ ಇನ್ಸ್ ಪೆಕ್ಟರ್ ನಯಾಜ್ ಸೇರಿದಂತೆ ಕೆಡಿಪಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.