Local News – ಹಬ್ಬ ಹರಿದಿನ ಸೇರಿದಂತೆ ಕೆಲವೊಮ್ಮೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಗೆ ಬರಬೇಕಾದ ಕೆ.ಎಸ್.ಆರ್.ಟಿ.ಸಿ ಅನುಸೂಚಿಗಳು ಏಕಾಏಕಿ ನಿಲ್ಲಿಸಲಾಗುತ್ತದೆ, ಇದರಿಂದಾಗಿ ತಾಲೂಕಿನ ಜನತೆ ಹಾಗೂ ವಿದ್ಯಾರ್ಥಿಗಳಿಗೆ ತುಂಬಾನೆ ಸಮಸ್ಯೆಯಾಗಲಿದೆ. ಕೂಡಲೇ ಎಲ್ಲಾ ಅನುಸೂಚಿಗಳನ್ನು ಕಾರ್ಯಗತ ಮಾಡಬೇಕೆಂದರು ಗುಡಿಬಂಡೆ ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆ ವತಿಯಿಂದ ಆಗ್ರಹಿಸಲಾಯಿತು. ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಗುಡಿಬಂಡೆ ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆ ವತಿಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಮಾರ್ಗ ಅನುಸೂಚಿಗಳು ಹಾಗೂ ಬಸ್ ಡಿಪೋ ನಿರ್ಮಾಣದ ಕುರಿತು ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ವರ್ತಕರ ಸಂಘದ ಕಾರ್ಯದರ್ಶಿ ಜಿ.ಲಕ್ಷ್ಮೀಪತಿ ಮಾತನಾಡಿ, ಗುಡಿಬಂಡೆಯನ್ನು ಕೆ.ಎಸ್.ಆರ್.ಟಿ.ಸಿ ಸಂಸ್ಥೆ ತುಂಬಾ ನಿರ್ಲಕ್ಷ್ಯತೆಯಿಂದ ಕಾಣುತ್ತದೆ. ಹಬ್ಬ ಹರಿದಿನಗಳಂದು, ಏನಾದರೂ ರಾಜಕೀಯ ಕಾರ್ಯಕ್ರಮಗಳಿದ್ದರೇ, ಜಾತ್ರೆಗಳ ಸಮಯದಲ್ಲಿ ಗುಡಿಬಂಡೆಗೆ ಬರಬೇಕಾದ ಬಸ್ ಗಳನ್ನು ಅಲ್ಲಿಗೆ ಕಳುಹಿಸಿ ಬಿಡುತ್ತಾರೆ. ಇದರಿಂದ ಪ್ರತಿನಿತ್ಯ ಸಂಚಾರ ಮಾಡುವ ಗುಡಿಬಂಡೆ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ. ಇದೀಗ ಅನೇಕ ಮಾರ್ಗಗಳು ನಿಂತಿದ್ದು, ಇದರಿಂದ ಸಮಸ್ಯೆಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು. ಜೊತೆಗೆ ಈ ಕುರಿತು ಗುಡಿಬಂಡೆ ನಾಗರೀಕರು ಹೋರಾಟಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು.
ಬಳಿಕ ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆಯ ಜಿ.ವಿ.ಗಂಗಪ್ಪ ಮಾತನಾಡಿ,ದಸರಾ ಹಬ್ಬದ ಪ್ರಯುಕ್ತ ಹಿಂದಿನಂತೆ ಈ ವರ್ಷವೂ ಕೂಡ ಅನೇಕ ಅನುಸೂಚಿ ಗಳನ್ನು ರದ್ದು ಪಡಿಸಿರುತ್ತಾರೆ. ವಿಶೇಷವಾಗಿ ಬಾಗೇಪಲ್ಲಿ ಘಟಕದ ಅನುಸೂಚಿ ಗಳಾದ 80/81 ಪುಟ್ಟ ಪರ್ತಿ – ಬೆಂಗಳೂರು, 18, 19, ಹಿಂದೂಪುರ – ಬೆಂಗಳೂರು, 28 ಗುಡಿಬಂಡೆ – ಬೆಂಗಳೂರು, 13 ಗುಡಿಬಂಡೆ – ಮೈಸೂರು, 51 ಬಾಗೇಪಲ್ಲಿ – ಗುಡಿಬಂಡೆ – ಗೌರೀಬಿದನೂರು, 74 / 75 ಗುಡಿಬಂಡೆ – ಬೆಂಗಳೂರು, 56 ಗುಡಿಬಂಡೆ – ತಿರುಪತಿ ಮಾರ್ಗಗಳನ್ನು ಕಡಿತಗೊಳಿಸಿದೆ. ಕೆಲವೊಮ್ಮೆ ಕಾಟಾಚಾರಕ್ಕಾಗಿ ಕಾರ್ಯಗತಗೊಳಿಸಲಾಗುತ್ತದೆ. ಆದ್ದರಿಂದ ಈ ಕುರಿತು ವೇದಿಕೆ ವತಿಯಿಂದ ಅಕ್ಟೋಬರ್ 23 ರಂದು ಕ್ಷೇತ್ರದ ಶಾಸಕರನ್ನು ಭೇಟಿ ಮಾಡಿ ಗುಡಿಬಂಡೆ ಬಸ್ ನಿಲ್ದಾಣದಿಂದ ಎಲ್ಲಾ ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಲು ಒತ್ತಾಯಿಸಬೇಕು. ಜೊತೆಗೆ ಬಸ್ ಡಿಪೋ ಸ್ಥಾಪನಗೆ ಶಾಸಕರ ಅಧ್ಯಕ್ಷತೆಯಲ್ಲಿ ಮಾನ್ಯ ಸಾರಿಗೆ ಸಚಿವರನ್ನು ಭೇಟಿಯಾಗಲು ಹಾಗೂ ಶಾಸಕರಿಂದ ಸಕಾರಾತ್ಮಕ ವಾಗಿ ಸ್ವಂದನೆ ದೊರೆಯದಿದ್ದಲ್ಲಿ ಮುಂದಿನ ಹೋರಾಟ ವನ್ನು ರೂಪಿಸಿ ಯಾವುದೇ ಕಾರಣಕ್ಕೂ ಬಾಗೇಪಲ್ಲಿ ಘಟಕದ ಬಸ್ಸುಗಳನ್ನು ಗುಡಿಬಂಡೆ ತಾಲ್ಲೂಕಿಗೆ ಪ್ರವೇಶಿಸದಂತೆ ಬಹಿಷ್ಕರಿಸಲು ತೀರ್ಮಾನಿಸಲಾಯಿತು.
ಈ ವೇಳೆ ಕರವೇ ಶ್ರೀನಿವಾಸ್ ಯಾದವ್, ನರೇಂದ್ರ, ಜೆಡಿಎಸ್ ಮುಖಂಡ ಶ್ರೀನಿವಾಸ್, ಮುಖಂಡರಾದ ಗು.ನ.ನಾಗೇಂದ್ರ, ಎಂ.ಸಿ.ಚಿಕ್ಕನರಸಿಂಹಪ್ಪ, ಇಸ್ಕೂಲಪ್ಪ, ಮಂಜುನಾಥ್, ಆದಿನಾರಾಯಣ, ಶ್ರೀನಾಥ್, ಮೊಹಮದ್ ನಾಸೀರ್, ರಾಜೇಶ್, ಸಿ.ಕೃಷ್ಣಪ್ಪ ಸೇರಿದಂತೆ ಹಲವರು ಇದ್ದರು.