Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರ ಆಯ್ಕೆಯ ಸಂಬಂಧ ನಡೆದ ಚುನಾವಣೆಯಲ್ಲಿ ಮಂಜುನಾಥರೆಡ್ಡಿ ರವರು ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಹಾಗೂ ಸಹಾಯಕ ಕೃಷಿ ನಿರ್ದೇಶಕ ಕೇಶವರೆಡ್ಡಿ ತಿಳಿಸಿದರು.

ಈ ಕುರಿತು ಮಾತನಾಡಿದ ಅವರು, ಗುಡಿಬಂಡೆ ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ 2025-26 ರಿಂದ 2029-30ನೇ ಸಾಲಿನ ಅವಧಿಗೆ ಚುನಾವಣೆ ನಡೆದಿತ್ತು. ಚುನಾವಣೆ ವೇಳಾಪಟ್ಟಿಯಂತೆ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಹಾಗೂ ಜಿಲ್ಲಾ ಪ್ರತಿನಿಧಿ ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು. ಅದರಂತೆ ಎಲ್ಲಾ ಸ್ಥಾನಗಳಿಗೂ ಎರಡು ನಾಮಪತ್ರಗಳು ಸಲ್ಲಿಕೆಯಾದ ಕಾರಣ ಚುನಾವಣೆ ನಡೆಸಬೇಕಾಯಿತು. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೆಚ್.ಎನ್.ಮಂಜುನಾಥ, ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಪಿ.ಲಕ್ಷ್ಮೀನಾರಾಯಣರೆಡ್ಡಿ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸಿ.ಜಿ.ಕೃಷ್ಣಪ್ಪ, ಖಜಾಂಚಿ ಸ್ಥಾನಕ್ಕೆ ಅಶ್ವತ್ಥಪ್ಪ, ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ವೈ.ವಿ.ನಾಗಭೂಷಣರೆಡ್ಡಿ ರವರುಗಳು ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆ ಎಂದರು.
ನಂತರ ತಾಲೂಕು ಕೃಷಿಕ ಸಮಾಜದ ನೂತನ ಅಧ್ಯಕ್ಷ ಹೆಚ್.ಎನ್.ಮಂಜುನಾಥರೆಡ್ಡಿ ಮಾತನಾಡಿ, ನನ್ನ ಮೇಲೆ ನಂಬಿಕೆಯನ್ನಿಟ್ಟು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಧನ್ಯವಾದಗಳು. ಮುಂದಿನ ದಿನಗಳ ಕೃಷಿಕ ಸಮಾಜದ ಮೂಲಕ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ ಮುಂದಿನ ಸಭೆಯಲ್ಲಿ ಚರ್ಚೆ ನಡೆಸಿ ಕೃಷಿಕ ಸಮಾಜದ ಷೇರುಗಳನ್ನು ಕಟ್ಟಿಸಿಕೊಳ್ಳುವಂತಹ ಕೆಲಸ ಸಹ ಮಾಡಲಾಗುತ್ತದೆ. ರೈತರ ಸರ್ವತೋಮುಖ ಅಭಿವೃದ್ದಿಗಾಗಿ ರೈತರೊಂದಿಗೆ ಕೈ ಜೋಡಿಸುತ್ತೇನೆ ಎಂದರು.

ಇದೇ ಸಮಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್ ಮಾತನಾಡಿ, ನೂತನ ಕೃಷಿಕ ಸಮಾಜದ ಆಡಳಿತ ಮಂಡಳಿ ತಾಲೂಕಿನ ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜಗಳು, ರಸಗೊಬ್ಬರಗಳು ದೊರಕಿಸಿಕೊಡಬೇಕು. ಜೊತೆಗೆ ಕಳಪೆ ರಸಗೊಬ್ಬರಗಳನ್ನು ಮಾರಾಟ ಮಾಡುವವರ ವಿರುದ್ದ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದರು.
ಈ ವೇಳೆ ಕೃಷಿ ಇಲಾಖೆಯ ತಾಂತ್ರಿಕ ಕೃಷಿ ಅಧಿಕಾರಿ ಶಂಕರಯ್ಯ, ಕೃಷಿಕ ಸಮಾಜದ ನಿರ್ದೇಶಕರಾದ ಕಾಲುವಗಡ್ಡಹಳ್ಳಿ ಜಿ.ಎನ್.ಸೀತಾರಾಮರೆಡ್ಡಿ, ನಿಲುಗುಂಬ ಬಿ.ಗಂಗಿರೆಡ್ಡಿ, ಚಿಕ್ಕತಮ್ಮನಹಳ್ಳಿ ಪಿ.ಎನ್.ವೇಣುಗೋಪಾಲ ಸೇರಿದಂತೆ ಹಲವರು ಇದ್ದರು.