Local News – ಸುಮಾರು ವರ್ಷಗಳಿಂದ ಗುಡಿಬಂಡೆಯ ರಾಮಪಟ್ಟಣ ರಸ್ತೆಯನ್ನು ಅಗಲೀಕರಣ ಮಾಡುವಂತೆ ವಾಹನ ಸವಾರರು ಹಾಗೂ ಕೆಲ ಸ್ಥಳೀಯರು ಮನವಿ ಮಾಡಿಕೊಂಡು ಬರುತ್ತಿದ್ದು, ಇದೀಗ ರಸ್ತೆ ಅಗಲೀಕರಣಕ್ಕೆ ಮೂಹೂರ್ತ ಕೂಡಿಬಂದಿದೆ. ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಮಧ್ಯ ರಸ್ತೆಯಿಂದ ಎರಡೂ ಬದಿ 20 ಅಡಿ ರಸ್ತೆ ಅಗಲೀಕರಣಕ್ಕಾಗಿ ಮಾರ್ಕಿಂಗ್ ಹಾಕಲಾಗಿದೆ.

Local News – ಈ ಹಿಂದೆ ಆಗಿದ್ದು ಏನು?
ಗುಡಿಬಂಡೆ ಪಟ್ಟಣದ ಹೃದಯಭಾಗದ ಮೂಲಕ ಹಾದುಹೋಗುವ ರಾಮಪಟ್ಟಣ ರಸ್ತೆ ಸ್ಥಳೀಯರಿಗೆ ಮಾತ್ರವಲ್ಲದೇ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿದೆ. ಆದರೆ ಈ ರಸ್ತೆ ತುಂಬಾ ಕಿರಿದಾದ ಕಾರಣದಿಂದ ಸುಮಾರು ವರ್ಷಗಳಿಂದ ಈ ರಸ್ತೆಯಲ್ಲಿ ಸಂಚರಿಸುವ ಜನರಿಗೆ ಕಿರಿಕಿರಿಯಾಗಿತ್ತು. ಕಳೆದೆರಡು ತಿಂಗಳ ಹಿಂದೆಯಷ್ಟೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರು ರಾಮಪಟ್ಟಣ ರಸ್ತೆ ಅಗಲೀಕರಣಕ್ಕೆ ಅಸ್ತು ಎಂದಿದ್ದರು. ಅದರಂತೆ ಆರಂಭಿಕ ಪ್ರಕ್ರಿಯೆಗಳೂ ಸಹ ಶುರುವಾಯ್ತು. ಬಳಿಕ ಪಪಂ ಅಧಿಕಾರಿಗಳು ಈ ರಸ್ತೆಯಲ್ಲಿ ಮಾಲೀಕರ ಆಸ್ತಿ ಎಷ್ಟು ಅಡಿ ಹೋಗಬಹುದು ಎಂಬ ಮಾಹಿತಿಗಾಗಿ ಮಾರ್ಕಿಂಗ್ ಹಾಕಲು ಮುಂದಾಗಿದ್ದರು. ಆದರೆ ಅಲ್ಲಿದ್ದ ಸ್ಥಳೀಯರು ನೊಟೀಸ್ ನೀಡದೇ ಅಗಲೀಕರಣಕ್ಕೆ ನಾವು ಬಿಡುವುದಿಲ್ಲ ಎಂದು ಗಲಾಟೆ ಮಾಡಿದ ಬಳಿಕ ಈ ಕಾರ್ಯ ಸ್ಥಗಿತಗೊಂಡಿತ್ತು.
Local News – ಶಾಸಕರ ಬಳಿ ಆಸ್ತಿ ಮಾಲೀಕರ ಮನವಿ
ಇದಾದ ಬಳಿಕ ಶಾಸಕ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದ್ದು, 20 ಅಡಿ ರಸ್ತೆ ಅಗಲೀಕರಣಕ್ಕೆ ಒಪ್ಪದೇ ಇದ್ದರೇ ಸರ್ಕಾರಿ ನಿಯಮಗಳಂತೆ ರಸ್ತೆ ಅಗಲೀಕರಣ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ನಂತರ ಈ ರಸ್ತೆಯ ಅಕ್ಕಪಕ್ಕದಲ್ಲಿ ಬರುವಂತಹ ಆಸ್ತಿ ಮಾಲೀಕರು 20 ಅಡಿ ರಸ್ತೆ ಮಾಡಲು ತಮಗೆ ಯಾವುದೇ ಅಭ್ಯಂತರವಿಲ್ಲ. ಆಸ್ತಿ ಕಳೆದುಕೊಂಡವರಿಗೆ ಏನಾದರೂ ಪರಿಹಾರ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಶಾಸಕರೂ ಸಹ ಒಪ್ಪಿ ಅಧಿಕಾರಿಗಳಿಗೆ ರಸ್ತೆ ಅಗಲೀಕರಣ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು. Read this also : ಗುಡಿಬಂಡೆ ರಾಮಪಟ್ಟಣ ರಸ್ತೆ ಅಗಲೀಕರಣ: 20 ಅಡಿನಾ? 43 ಅಡಿನಾ?

Local News – ಶೀಘ್ರದಲ್ಲೆ ರಸ್ತೆ ಅಗಲೀಕರಣ ಕಾರ್ಯ?
ಸದ್ಯ ಸೆ.27 ರಂದು ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ಪಪಂ ಅಧಿಕಾರಿಗಳು ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಮಾರ್ಕಿಂಗ್ ಕೆಲಸವನ್ನು ಶುರು ಮಾಡಿದರು. ಮುಖ್ಯರಸ್ತೆ ಮಧ್ಯಭಾಗದಿಂದ ಎರಡೂ ಬದಿ 20 ಅಡಿ ರಸ್ತೆ ಅಗಲೀಕರಣ ಮಾಡಲು ಗುರುತು ಹಾಕಲಾಯಿತು. ಈ ಸಮಯದಲ್ಲಿ ಅಂಗಡಿ ಹಾಗೂ ಆಸ್ತಿ ಮಾಲೀಕರು ಸಹ ಹಾಜರಿದ್ದು, ಈ ಕೆಲಸಕ್ಕೆ ಸಹಕಾರ ನೀಡಿದರು. ಇನ್ನೂ ರಸ್ತೆ ಅಗಲೀಕರಣ ಕೆಲಸ ಸಹ ಶೀಘ್ರದಲ್ಲೆ ನೆರವೇರಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
