Local News – ದೇಶವನ್ನು ಆಳುತ್ತಿರುವ ಸರ್ಕಾರಗಳು ಬಂಡವಾಳಷಾಹಿಗಳ ಪರ, ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುತ್ತವೆ ವಿನಃ ರೈತರ ಪರ ಕೆಲಸ ಮಾಡೊಲ್ಲ. ಈ ನಿಟ್ಟಿನಲ್ಲಿ ಎಲ್ಲಾ ರೈತರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾಗಿದೆ ಎಂದು ಅಖಿಲ ಕರ್ನಾಟಕ ರೈತ ಸಂಘಟನೆಯ ಜಿಲ್ಲಾ ಸಹ ಸಂಚಾಲಕ ಹೆಚ್.ಪಿ.ಲಕ್ಷ್ಮೀನಾರಾಯಣ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ರೈತ ಸಂಘಟನೆಯ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ರೈತರ ಸಮಾವೇಶದಲ್ಲಿ ಮಾತನಾಡಿದ ಅವರು, ಸುಮಾರು ದಿನಗಳಿಂದ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ರೂಪಿಸಲು ಜಿಲ್ಲೆಯ ಹಲವು ಹೋರಾಟಗಾರರು ಚಿಂತನೆ ನಡೆಸಲಾಗಿತ್ತು. ಅದರಂತೆ ಇದೀಗ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಅಖಿಲ ಕರ್ನಾಟಕ ರೈತ ಸಂಘಟನೆ ಆರಂಭಿಸಲಾಗುತ್ತಿದೆ. ಈ ಸಂಬಂಧ ಜಿಲ್ಲೆಯಾದ್ಯಂತ ರೈತರ ಸಮಾವೇಶಗಳನ್ನು ಮಾಡಲಾಗುತ್ತಿದೆ. ಇನ್ನೂ ಸರ್ಕಾರಗಳು ರೈತರ ಪರ ಕೆಲಸ ಮಾಡೋದು ತುಂಬಾನೆ ವಿರಳ. ಆದರೆ ಬಂಡವಾಳಷಾಹಿಗಳ ಪರವಾಗಿ ಕೆಲಸ ಮಾಡೋಕೆ ಮುಂದಿರುತ್ತಾರೆ. ದೊಡ್ಡ ದೊಡ್ಡ ಉದ್ದಿಮೆದಾರರ ಸಾಲ ಮನ್ನಾ ಮಾಡುತ್ತಾರೆ. ಆದರೆ ರೈತರ ಸಾಲ ಮನ್ನಾ ಮಾಡಲು ಮೀನಾಮೇಷ ಎಣಿಸುತ್ತಾರೆ. ಜೊತೆಗೆ ದೇಶ-ವಿದೇಶಗಳ ದೊಡ್ಡ ದೊಡ್ಡ ಉದ್ದಿಮೆದಾರರನ್ನು ಕರೆತಂದು ಕಾರ್ಪೋರೇಟ್ ಕೃಷಿ ಮಾಡಲು ಸರ್ಕಾರಗಳೇ ಅನುವು ಮಾಡಿಕೊಡುತ್ತಿವೆ. ಆದ್ದರಿಂದ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಅಖಿಲ ಕರ್ನಾಟಕ ರೈತ ಸಂಘಟನೆಯನ್ನು ಬಲಪಡಿಸಬೇಕೆಂದರು.
ಬಳಿಕ ಸಂಘಟನೆಯ ಜಿಲ್ಲಾ ಸಂಚಾಲಕ ಮಂಜುನಾಥರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಎದುರಿಸಲು ಹಾಗೂ ಬಗೆಹರಿಸಲು ಜಿಲ್ಲೆಯಲ್ಲಿ ಹೊಸ ರೈತ ಸಂಘಟನೆಯನ್ನು ಕಟ್ಟುತ್ತಿದ್ದೇವೆ. ನಾವು ಮೂಲತಃ ರೈತರು, ಕೃಷಿಯನ್ನು ಬಿಟ್ಟು ನಾವು ಬೇರೆ ಕೆಲಸ ಮಾಡೋಕೆ ಆಗೊಲ್ಲ. ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂಧನೆ ನೀಡುತ್ತಿಲ್ಲ. ಅಂಬಾನಿ, ಅದಾನಿ, ಬಜಾಜ್ ಕಂಪನಿಗಳು ರೈತರಿಂದ ವಿಮೆ ಕಟ್ಟಿಸಿಕೊಂಡು ಅವರಿಗೆ ವಿಮೆ ಪರಿಹಾರ ನೀಡುತ್ತಿಲ್ಲ. ರೈತರಿಗೆ ಮೋಸ ಮಾಡುತ್ತಿದ್ದಾರೆ. ಜೊತೆಗೆ ಅನೇಕ ಸರ್ಕಾರಿ ಸಂಸ್ಥೆಗಳನ್ನು ಕಾರ್ಪೋರೇಟ್ ಮಾಡಲು ಹೊರಡಿದೆ. ಈ ಎಲ್ಲಾ ಕಾರಣಗಳಿಂದ ನಾವು ರೈತರಿಗಾಗಿ ಈ ಸಂಘಟನೆಯನ್ನು ಹುಟ್ಟಿಹಾಕಿದ್ದೇವೆ. ಈ ಸಂಘಟನೆಯ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ. ಯಾವುದೇ ಸರ್ಕಾರವಿರಲಿ ರೈತರಿಗೆ ಸಮಸ್ಯೆಯಾದರೇ ಅವರ ವಿರುದ್ದ ಹೋರಾಟ ಮಾಡುವ ಕೆಲಸ ಮಾಡುತ್ತೇವೆ. ಕಚೇರಿಗಳಲ್ಲಿ ರೈತರ ಕೆಲಸಗಳಿಗೆ ಸಮಸ್ಯೆಯಾದರೇ ಹೋರಾಟ ನಡೆಸುತ್ತೇವೆ. ಪ್ರತಿಯೊಬ್ಬ ರೈತ ಈ ಸಂಘಟನೆಯಲ್ಲಿ ಸದಸ್ಯತ್ವ ಪಡೆದುಕೊಂಡು ಸಂಘಟನೆ ಬಲಪಡಿಸಬೇಕೆಂದರು.
ಈ ವೇಳೆ ರೈತ ಸಂಘದ ಸದಸ್ಯತ್ವಕ್ಕೆ ಚಾಲನೆಯನ್ನು ನೀಡಲಾಯಿತು. ಜಿಲ್ಲೆಯಾದ್ಯಂತ ರೈತರು ಸಂಘಟನೆಯಲ್ಲಿ ಸದಸ್ಯತ್ವ ಪಡೆದುಕೊಳ್ಳಬೇಕೆಂದು ಸಂಘಟನೆಯ ಮುಖಂಡರು ಮನವಿ ಮಾಡಿದರು. ಈ ಸಮಯದಲ್ಲಿ ಕೋಚಿಮುಲ್ ನಿರ್ದೇಶಕರಾದ ಆದಿನಾರಾಯಣರೆಡ್ಡಿ, ಮುಖಂಡರಾದ ನರಸಿಂಹಮೂರ್ತಿ, ಬಾಲಕೃಷ್ಣಾರೆಡ್ಡಿ, ರವಿಚಂದ್ರರೆಡ್ಡಿ, ಚೌಡರೆಡ್ಡಿ, ಹೇಮಚಂದ್ರ, ಶ್ರೀರಾಮ ನಾಯಕ್ ಸೇರಿದಂತೆ ಹಲವರು ಇದ್ದರು.