Local News – ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಿದಾಗ ಮಾತ್ರ ಇತರೆ ಸಮುದಾಯಗಳಂತೆ ಅಲ್ಪಸಂಖ್ಯಾತ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಪುರಸಭೆ ಮಾಜಿ ಸದಸ್ಯ ಹಾಗೂ ಮುಸ್ಲಿಂ ಮುಖಂಡರಾದ ಡಾ.ಮಹಮ್ಮದ್ ನೂರುಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಜಮಿಯ್ಯತ್ ಉಲೆಮಾ ಹಿಂದ್ ಇವರ ಸಂಯುಕ್ತ ಆಶ್ರಯದಲ್ಲಿ ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಉರ್ದು ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಪ್ರೇರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮುಸ್ಲಿಂ ಸಮುದಾಯದವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ನಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದ ಸಮುದಾಯವಾಗಿದೆ. ಈ ಸಮುದಾಯದ ಬಹುತೇಕರು ಬಡತನದ ಹಿನ್ನಲೆಯಲ್ಲಿ ತಮ್ಮ ಮಕ್ಕಳನ್ನು ಕೂಲಿಕಾರ್ಮಿಕರಾಗಿ, ಕಟ್ಟಡ ಕಾರ್ಮಿಕರಾಗಿ, ವೈರಿಂಗ್, ಬೈಕ್, ಕಾರು ಇತ್ಯಾಧಿ ವಾಹನಗಳ ಮೆಕಾನಿಕ್ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೀವನ ನಡೆಸುತ್ತಿರುವುದರಿಂದ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಮಟುಕುಗೊಳಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಇತರೆ ಸಮುದಾಯಗಳಂತೆ ಅಲ್ಪಸಂಖ್ಯಾತ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರೆ ಮಕ್ಕಳನ್ನು ಕೆಲಸಗಳಿಗೆ ಕಳುಹಿಸುವ ಬದಲಿಗೆ ಶಿಕ್ಷಣ ಹಾದಿಯಲ್ಲಿ ಮುಂದುವರೆಸುವ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಹ ಕೆಲಸಕ್ಕೆ ಮುಂದಾಗಬೇಕಾದ ಅಗತ್ಯವಿದೆ ಎಂದರಲ್ಲದೆ ಈ ಬಗ್ಗೆ ಸಮುದಾಯದ ಮುಖಂಡರು, ಮಸೀಧಿಗಳ ಮೌಲ್ವಿಗಳು ಶೈಕ್ಷಣಿಕ ಅಭಿವೃದ್ದಿ ಬಗ್ಗೆ ಅರಿವು ಮೂಡಿಸುವಲ್ಲಿ ಪ್ರಮುಖಪಾತ್ರವಹಿಸಬೇಕಾಗಿದೆ. ಶೈಕ್ಷಣಿಕ ಅಭಿವೃದ್ದಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರದ ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮೊಬೈಲ್ ಗೀಳಿನಿಂದ ಹಾಗೂ ಕೆಟ್ಟ ವ್ಯಸನಗಳಿಂದ ದೂರ ಸರಿದು ಶ್ರದ್ದಾಭಕ್ತಿಯಿಂದ ಹಾಗೂ ಕಠಿಣ ಪರಿಶ್ರಮದಿಂದ ವಿದ್ಯೆ ಕಲಿತು ಗುರಿಯನ್ನು ಸಾಧಿಸುವಂತಹ ಪ್ರಯತ್ನ ಮಾಡಬೇಕು. ಉನ್ನತ ಹುದ್ದೆಗಳನ್ನು ಅಲಂಕರಿಸಿಬೇಕು, ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸುವುದನ್ನು ಬಾಲ್ಯದಿಂದಲ್ಲೇ ಮೈಗೂಡಿಸಿಕೊಳ್ಳಬೇಕೆಂದರು ಕರೆ ನೀಡಿದರು.
ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಅಧಿಕಾರಿ ವೆಂಕಟರಾಮ್ ಮಾತನಾಡಿ ಮಕ್ಕಳ ಶಿಕ್ಷಣದ ವಿಚಾರದಲ್ಲಿ ಶಾಲೆಯಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಮನೆಯಲ್ಲಿ ಪೋಷಕರ ಪಾತ್ರವೂ ಸಹಷ್ಟೇ ಮುಖ್ಯವಾಗಿರುತ್ತೆ. ಮಕ್ಕಳು ಕಷ್ಟಪಟ್ಟು ಓದುವ ಬದಲಿಗೆ ಇಷ್ಠಪಟ್ಟು ಓದುವುದನ್ನು ಅವ್ಯಾಸ ಬೆಳಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಮಹಮ್ಮದ್ ಆಕ್ರಂ, ಕೆಡಿಪಿ ಸದಸ್ಯ ರಿಜ್ವಾನ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಮಹಬೂಬ್ ಬಾಷಾ, ಉರ್ದು ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸಲ್ಮಾ, ನಿವೃತ್ತ ಮುಖ್ಯ ಶಿಕ್ಷಕ ಮುನೀರ್ ಅಹಮ್ಮದ್, ಶಿಕ್ಷಕರಾದ ಸಾಜಿದಾ, ರಾಹೀಲ್, ಶಶೀಕಲಾ, ಸಯೀದುನೀಸ, ಭಾಸ್ಕರ್‍ರೆಡ್ಡಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ನೂರುಲ್ಲಾ ಬೇಗ್ ಮತ್ತಿತರರು ಇದ್ದರು.