Crime News – ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳಿಗೆ ಕಾನೂನಿನಲ್ಲಿ ಕಠಿಣ ಕಾನೂನು ಜಾರಿಯಲ್ಲಿದ್ದರೂ ಸಹ ಈ ಕ್ರೂರ ಘಟನೆಗಳು ನಿಲ್ಲುತ್ತಿಲ್ಲ. ಇದೀಗ ಚಲಿಸುತ್ತಿದ್ದ ರೈಲಿನಲ್ಲಿ ಇಬ್ಬರು ವ್ಯಕ್ತಿಗಳು ಗರ್ಭಿಣಿಯ ಮೇಲೆ ಹಲ್ಲೆ ನಡೆಸಿ, ಆಕೆಯನ್ನು ರೈಲಿನಿಂದ ಹೊರ ತಳ್ಳಿದ್ದಾರೆ. ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಚಲಿಸುತ್ತಿರುವ ರೈಲಿನಲ್ಲಿ ನಾಲ್ಕು ತಿಂಗಳ ಗರ್ಭಿಣಿ ಮಹಿಳೆಯ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ. ಸಂತ್ರಸ್ತೆ ಮಹಿಳೆ ಶುಕ್ರವಾರ ಆಂಧ್ರಪ್ರದೇಶದ ಚಿತ್ತೂರಿಗೆ ಹೋಗುತ್ತಿದ್ದರಂತೆ. ಜೋಲಾರ್ಪೇಟೆ ನಿಲ್ದಾಣದ ಬಳಿ ಮಹಿಳೆ ಶೌಚಾಲಯಕ್ಕೆ ಹೋಗಲು ತನ್ನ ಬರ್ತ್ ನಿಂದ ಎದ್ದಾಗ ಇಬ್ಬರು ವ್ಯಕ್ತಿಗಳು ಮಹಿಳೆಯನ್ನು ಹಿಂಬಾಲಿಸಿದ್ದಾರೆ. ಇದನ್ನು ನೋಡಿದ ಸಂತ್ರಸ್ತೆ ಭಯದಿಂದ ಸಹಾಯಕ್ಕಾಗಿ ಕೂಗುತ್ತಾ ಬೋಗಿಯ ಕಡೆ ಓಡಿದ್ದಾರೆ. ಈ ವೇಳೆ ಆರೋಪಿಗಳು ಗರ್ಭಿಣಿ ಮಹಿಳೆಯನ್ನು ಹಿಂಬಾಲಿಸಿ ಕೆ.ವಿ.ಕುಪ್ಪಂ ಬಳಿ ರೈಲಿನಿಂದ ಹೊರಗೆ ತಳ್ಳಿದ್ದಾರೆ ಎನ್ನಲಾಗಿದೆ.

ಇನ್ನೂ ಮಹಿಳೆ ರೈಲಿನಿಂದ ಬಿದ್ದ ಕಾರಣ ಗಂಭೀರವಾಗಿ ಗಾಯಗೊಂಡಿದ್ದರು. ಮಹಿಳೆಯನ್ನು ಆ ಸ್ಥಿತಿಯಲ್ಲಿ ನೋಡಿದ ಸ್ಥಳೀಯರು ಆಕೆಯನ್ನು ವೆಲ್ಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಹಿಳೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ. ಈ ಪ್ರಕರಣದ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಮರಾಜ್ ಎಂಬಾತನನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ಪತ್ತೆ ಮಾಡಲು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ತಮಿಳುನಾಡು ಡಿಎಂಕೆ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಗರ್ಭಿಣಿ ಮಹಿಳೆಯ ಮೇಲೆ ಇಬ್ಬರು ವ್ಯಕ್ತಿಗಳು ಲೈಂಗಿಕ ದೌರ್ಜನ್ಯವೆಸಗಿ, ಆಕೆಯನ್ನು ರೈಲಿನಿಂದ ಹೊರಗೆ ತಳ್ಳಿದ್ದಾರೆ. ಇದೊಂದು ಆಘಾತಕಾರಿ ಘಟನೆಯಾಗಿದೆ. ತಮಿಳುನಾಡಿನಲ್ಲಿ ಮಹಿಳೆಯರು ಸುರಕ್ಷಿತವಾಗಿ ನಡೆಯಲು ಸಾಧ್ಯವಾಗತ್ತಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯುವಲ್ಲಿ ಡಿಎಂಕೆ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.