ಗುಡಿಬಂಡೆ ಪಿ.ಎಲ್.ಡಿ ಬ್ಯಾಂಕ್ ಆಡಳಿತ ಮಂಡಳಿ ಇತ್ತೀಚಿಗೆ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರೈತರನ್ನು ಕಿಡಿಗೇಡಿಗಳು ಎಂದು ಅವಮಾನಿಸಿದ್ದು ಹಾಗೂ ಮತದಾನದ ಹಕ್ಕಿಲ್ಲ ಎಂದು ಷೇರುದಾರರಿಗೆ ನೊಟೀಸ್ ನೀಡಿದ ಕಾರಣದಿಂದ ತಾಲೂಕು (Local News) ಪಿ.ಎಲ್.ಡಿ ಬ್ಯಾಂಕ್ ಮುಂಭಾಗ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ, ಸಿಪಿಎಂ, ಕೆ.ಪಿ.ಆರ್.ಎಸ್ ಸಂಘಟನೆಗಳ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್ ಮಾತನಾಡಿ, ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಷೇರುದಾರರಿರುವ ಗುಡಿಬಂಡೆ ತಾಲೂಕು ಪಿ.ಎಲ್.ಡಿ ಬ್ಯಾಂಕ್ ನಲ್ಲಿ ಸುಮಾರು 3 ಸಾವಿರ ಮಂದಿ ಷೇರುದಾರರು ತಮಗೆ ಮತದಾನದ ಹಕ್ಕಿಲ್ಲ ಎಂದು ನೊಟೀಸ್ ನೀಡಿದ್ದರು. ಈ ಕುರಿತು ಕೆಲವು ದಿನಗಳ ಹಿಂದೆಯಷ್ಟೆ ಪಿ.ಎಲ್.ಡಿ ಬ್ಯಾಂಕ್ ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರು ಮತದಾನದ ಹಕ್ಕಿಲ್ಲ ಎಂದು ನೊಟೀಸ್ ನೀಡಿದ ಬಗ್ಗೆ ವಿರೋಧ ವ್ಯಕ್ತಪಡಿಸಿ ಸಭೆಯನ್ನು ಬಹಿಷ್ಕರಿಸಿದ್ದೆವು. ಈ ಸಮಯದಲ್ಲಿ ಪಿ.ಎಲ್.ಡಿ ಬ್ಯಾಂಕ್ ಆಡಳಿತ ಮಂಡಳಿಯ ಸದಸ್ಯರುಗಳು ಪತ್ರಿಕಾಗೋಷ್ಟಿ ನಡೆಸಿ ಷೇರುದಾರರನ್ನು ಕಿಡಿಗೇಡಿಗಳು ಎಂದು ಅವಮಾನಿಸಿದ್ದರು. ಈ ಹಿನ್ನೆಲೆಯಲ್ಲಿ ರೈತ ಸಂಘ ಹಾಗೂ ವಿವಿಧ ಸಂಘಗಳ ಸಹಯೋಗದಲ್ಲಿ ಪಿ.ಎಲ್.ಡಿ ಬ್ಯಾಂಕ್ ಆಡಳಿತ ಮಂಡಳಿಯನ್ನು ವಜಾ ಗೊಳಿಸುವಂತೆ ಹಾಗೂ ಮತ್ತೊಮ್ಮೆ ಸಾಮಾನ್ಯ ಸಭೆ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದೇವೆ. ಪಿ.ಎಲ್.ಡಿ ಬ್ಯಾಂಕ್ ಇರುವುದು ರೈತರಿಗೆ ಅನುಕೂಲವಾಗುವುದಕ್ಕೆ ವಿನಃ ಆಡಳಿತ ಮಂಡಳಿ ಉದ್ದಾರಕ್ಕಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಬಳಿಕ ಮುಖಂಡ ದ್ವಾರಕನಾಥನಾಯ್ಡು ಮಾತನಾಡಿ, ಪಿ.ಎಲ್.ಡಿ ಬ್ಯಾಂಕ್ ನಲ್ಲಿ ಅರ್ಹ ರೈತರಿಗೆ ಸರಿಯಾಗಿ ಸಾಲ ಸೌಲಭ್ಯಗಳು ಸಿಗುತ್ತಿಲ್ಲ. ಜೊತೆಗೆ ಗುಡಿಬಂಡೆ ವ್ಯಾಪ್ತಿಯಲ್ಲೂ ಸಹ ಇನ್ನೂರಕ್ಕೂ ಅಧಿಕ ಮಂದಿ ಷೇರುದಾರರಿದ್ದಾರೆ. ಆದರೆ ಅವರು ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ಕೊಡುತ್ತಿಲ್ಲ. ಸರ್ಕಾರ ನಿಯಮ ಮಾಡಿದೆ ಅಂತಾ ಷೇರುದಾರರಿಗೆ ತಮಗೆ ಮತದಾನದ ಹಕ್ಕಿಲ್ಲ ಅಂತಾ ನೊಟೀಸ್ ಕಳುಹಿಸಿದ್ದೀರಾ, ನಮಗೆ ಮತದಾನದ ಹಕ್ಕಿಲ್ಲ ಅಂದ ಮೇಲೆ ವಾರ್ಷಿಕ ಸಾಮಾನ್ಯ ಸಭೆಗೆ ಏಕೆ ಕರೆಯುತ್ತೀರಿ. ಜೊತೆಗೆ ಸಾಲ ಸೌಲಭ್ಯಗಳು ಕೇವಲ ಆಡಳಿತ ಮಂಡಳಿಯ ಸೂಚನೆ ಮೇರೆಗೆ ನೀಡಲಾಗುತ್ತಿದೆ. ಕೊಟ್ಟಿರುವಂತವರಿಗೆ ಪುನಃ ಪುನಃ ಸಾಲ ನೀಡಲಾಗುತ್ತಿದೆ. ಉಳಿದ ರೈತರಿಗೆ ಮಾತ್ರ ಸಾಲ ನೀಡಲು ಬ್ಯಾಂಕ್ ನಿಂದ ಆಗುತ್ತಿಲ್ಲ. ಈ ಸಮಸ್ಯೆಗಳನ್ನು ಉನ್ನತ ಅಧಿಕಾರಿಗಳು ಬಗೆಹರಿಸಬೇಕು ಎಂದರು.
ಈ ವೇಳೆ ಬ್ಯಾಂಕ್ ನಿಂದ ನೀಡಿದ ನೊಟೀಸ್ ಗಳನ್ನು ಸುಟ್ಟು ಹಾಕುವ ಮೂಲಕ ರೈತರು ಹಾಗೂ ಷೇರುದಾರರು ತಮ್ಮ ಆಕ್ರೋಷವನ್ನು ಹೊರಹಾಕಿದರು. ಸ್ಥಳಕ್ಕೆ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಸಹಕಾರ ಅಭಿವೃದ್ದಿ ಅಧಿಕಾರಿ ಪ್ರೇಮಕುಮಾರ್, ಪಿ.ಎಲ್.ಡಿ ಬ್ಯಾಂಕ್ ಕಾರ್ಯದರ್ಶಿ ಸಂತೋಷ್, ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಸಮಸ್ಯೆಯನ್ನು ಶೀಘ್ರ ಬಗೆಹರಿಸದೇ ಇದ್ದರೇ ಮತ್ತೆ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಈ ಸಮಯದಲ್ಲಿ ರೈತರ ಸಂಘದ ಪದಾಧಿಕಾರಿಗಳು, ಸಿಪಿಎಂ ಮುಖಂಡರು, ಕೆ.ಪಿ.ಆರ್.ಎಸ್ ಸಂಘಟನೆಯ ಮುಖಂಡರು ಹಾಜರಿದ್ದರು.