Local News -ಎಲ್ಲಾ ಮಕ್ಕಳಲ್ಲೂ ಪ್ರತಿಭೆ ಎಂಬುದು ಇದ್ದೇ ಇರುತ್ತದೆ, ಆದರೆ ಆ ಪ್ರತಿಭೆ ಹೊರತರಲು ಶಿಕ್ಷಕರು ಎಷ್ಟು ಪ್ರೋತ್ಸಾಹ ನೀಡುತ್ತಾರೋ ಅದೇ ರೀತಿ ಪೋಷಕರು ಸಹ ಪ್ರೋತ್ಸಾಹ ನೀಡಿದಾಗ ಮಗುವಿನಲ್ಲಿರುವ ಪ್ರತಿಭೆ ಹೊರಬರಲು ಸಾಧ್ಯವಾಗುತ್ತದೆ ಎಂದು ಕೆಡಿಪಿ ಸದಸ್ಯ ರಿಯಾಜ್ ಪಾಷ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಸಾಮಾನ್ಯವಾಗಿ ಮಕ್ಕಳಲ್ಲಿ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಆದರೆ ವೇದಿಕೆ ಭಯ ಸೇರಿದಂತೆ ವಿವಿಧ ಕಾರಣಗಳಿಂದ ಮಗುವಿನಲ್ಲಿರುವ ಪ್ರತಿಭೆ ಹೊರತರಲು ಆಗುವುದಿಲ್ಲ. ಆದ್ದರಿಂದ ಮಕ್ಕಳಲ್ಲಿನ ಪ್ರತಿಭೆಯನ್ನು ಗುರ್ತಿಸಿ ಅವರಿಗೆ ಪ್ರೋತ್ಸಾಹ ನೀಡಿದ್ದೇ ಆದಲ್ಲಿ, ಆ ಮಕ್ಕಳು ಸಹ ಮುಂದೆ ಬರುತ್ತಾರೆ. ಆದ್ದರಿಂದ ಪೋಷಕರು ಶಿಕ್ಷಕರ ಜೊತೆಗೆ ಕೈಜೋಡಿಸಿ ಮಕ್ಕಳಲ್ಲಿನ ಪ್ರತಿಭೆ ಹೊರತೆಗೆಯುವ ಕೆಲಸ ಮಾಡಬೇಕು. ಇನ್ನೂ ಸರ್ಕಾರಿ ಉರ್ದು ಶಾಲೆಗೆ ನಮ್ಮ ಪ್ರೋತ್ಸಾಹ ಸದಾ ಇರುತ್ತದೆ ಎಂದರು.
ನಂತರ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಮೊಹಮದ್ ನಾಸೀರ್ ಮಾತನಾಡಿ, ಸರ್ಕಾರಿ ಉರ್ದು ಶಾಲೆಗೆ ದಾಖಲಾತಿ ಕಡಿಮೆಯಾಗುತ್ತಿದೆ. ಆದ್ದರಿಂದ ನಮ್ಮ ಸಂಘಟನೆ ಹಾಗೂ ಶಾಲಾ ಎಸ್.ಡಿ.ಎಂ.ಸಿ ಜೊತೆಗೆ ದಾಖಲಾತಿ ಆಂದೋಲನ ನಡೆಸಿ ಮಕ್ಕಳನ್ನು ದಾಖಲು ಮಾಡಿಸಲಾಗಿತ್ತು. ಜನರಿಗೆ ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ. ಸರ್ಕಾರಿ ಶಾಲೆಯಲ್ಲೂ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಆದ್ದರಿಂದ ಉರ್ದು ಶಾಲೆಯ ಉಳಿವಿಗೆ ಎಲ್ಲಾ ಪೋಷಕರು ಶ್ರಮಿಸಬೇಕು. ಇದೀಗ ಉರ್ದು ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳು ಉತ್ತಮವಾಗಿ ವಿಜ್ಞಾನಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಬೇಕೆಂದರು.

ಕಾರ್ಯಕ್ರಮದಲ್ಲಿ ಉರ್ದು ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಿದ್ದು, ವಿದ್ಯಾರ್ಥಿಗಳು ವಿವಿಧ ಮಾದರಿಗಳನ್ನು ಪ್ರದರ್ಶನ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ಇನ್ನೂ ವಿದ್ಯಾರ್ಥಿಗಳಿಗೆ ಉರ್ದು ಸಾಹಿತ್ಯ ಪರಿಷತ್ ವತಿಯಿಂದ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಈ ವೇಳೆ ಉರ್ದು ಶಾಲೆಯ ಮುಖ್ಯ ಶಿಕ್ಷಕಿ ಇಂತಿಯಾಜ್ ಉನ್ನೀಸಾ, ಶಿಕ್ಷಕರಾದ ರವೀಂದ್ರ ಗೌಡ, ಕೌಸರ್ ಸುಲ್ತಾನ, ನಸ್ರೀನ್ ತಾಜ್, ಶಾಫಿಯಾ ಕೌಸರ್, ಮುಖಂಡರಾದ ಅಬ್ದುಲ್ ವಹಾಬ್, ಷಫೀ ಉಲ್ಲಾ ಸೇರಿದಂತೆ ಹಲವರು ಇದ್ದರು.