Local News – ಭೂ ಸುಧಾರಣಾ ಕಾಯ್ದೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಹಿಂದುಳಿದ ವರ್ಗ ಸೇರಿದಂತೆ ಹಲವು ವರ್ಗಗಳ ಶ್ರೇಯೋಭಿವೃದ್ದಿಗೆ ಶ್ರಮಿಸಿದ ಮಹಾನ್ ನಾಯಕ ದಿ.ಡಿ.ದೇವರಾಜ್ ಅರಸು ರವರು ಎಂದು ಗುಡಿಬಂಡೆ ತಹಸೀಲ್ದಾರ್ ಸಿಗ್ಬತ್ತುಲ್ಲಾ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹಿಂದುಳಿದ ವರ್ಗಗಳ ಇಲಾಖೆಯ ಡಿ. ದೇವರಾಜು ಅರಸು ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ದಿ.ಡಿ.ದೇವರಾಜ್ ಅರಸು ರವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Local News – ಅರಸು ಅವರ ಜನಪರ ಕೆಲಸಗಳು: ಸಮಾಜಕ್ಕೆ ದೊಡ್ಡ ಕೊಡುಗೆ
ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಅರಸು ರವರು ತಮ್ಮ ಆಡಳಿತಾವಧಿಯಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಅಂದಿನ ಕಾಲದಲ್ಲಿ ಜಾರಿಯಲ್ಲಿದ್ದ ಜೀತ ಪದ್ದತಿಯನ್ನು ತೊಡೆದು ಹಾಕಲು ಜೀತ ಪದ್ದತಿಯನ್ನು ರದ್ದುಗೊಳಿಸಿ ಲಕ್ಷಾಂತರ ಅಸಹಾಯಕರ ಪಾಲಿಗೆ ದೇವರು ಎನಿಸಿಕೊಂಡರು. ರಕ್ತ ರಹಿತ, ಮೌನ ಕ್ರಾಂತಿಯ ಮೂಲಕ ಕನ್ನಡ ನಾಡಿನ ಭೂರಹಿತರಿಗೆ 7 ಲಕ್ಷ ಹೆಕ್ಟೇರ್ ಭೂಒಡೆತನ ನೀಡುವ ಮೂಲಕ ಇಂದಿಗೂ ಜನ ಮಾನಸದಲ್ಲಿ ಪ್ರಾತಃ ಸ್ಮರಣೀಯರಾಗಿದ್ದಾರೆ ಎಂದು ತಿಳಿಸಿದರು.
Local News – ದೇವರಾಜ ಅರಸು ಅವರ ಮೀಸಲಾತಿ ಸಾಧನೆ
ಬಳಿಕ ಮುಖ್ಯ ಭಾಷಣಕಾರ ಪ್ರೊ. ಕೆ. ಎನ್. ಕೃಷ್ಣಪ್ಪ ಮಾತನಾಡಿ, ದಕ್ಷಿಣ ಭಾರತದಲ್ಲಿ ಹಿಂದುಳಿದ ವರ್ಗಗಳಿಗೆ ಭದ್ರ ಬುನಾದಿ ಹಾಕಿದ ಮಹಾನ್ ನೇತಾರ. ಶಿಕ್ಷಣ, ಉದ್ಯೋಗ ಗಳಲ್ಲಿ ಮೀಸಲಾತಿ ಪಡೆದು ಅಭಿವೃದ್ಧಿ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಭಾರತದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಇದಕ್ಕೆ ದೇವರಾಜ ಅರಸು ಕಾರಣಕರ್ತರು. ಡಿ. ದೇವರಾಜ ಅರಸು ಅವರು ಬಡವರ ಪರವಾಗಿದ್ದರು. ಬಡತನ ರೇಖೆಗಿಂತ ಕೆಳಗಿನವರನ್ನು ಮುಖ್ಯವಾಹಿನಿಗೆ ತಂದು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಸದೃಢಗೊಳಿಸುವ ಗುರಿ ಹೊಂದಿದ್ದ ಅವರು ಈ ರಾಜ್ಯದ ಮತ್ತು ಈ ದೇಶದ ಹಿಂದುಳಿದ ವರ್ಗಗಳ, ದಲಿತರ, ಬಡವರ ಮನಸ್ಸಿನಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿದ್ದಾರೆ ಎಂದರು.

Local News – ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಕಾರ್ಯಕ್ರಮದ ಪ್ರಸ್ತಾವಿಕ ಭಾಷಣ ಮಾಡಿದ ದೇವರಾಜ್ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶಂಕರಯ್ಯ ದೇವರಾಜ್ ಅರಸು ರವರ ಸಾಧನೆಗಳನ್ನು ವಿವರಿಸಿದರು, ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಇಲಾಖೆಯ ವತಿಯಿಂದ ದೊರೆಯುವ ಸೌಲಭ್ಯಗಳ ಕುರಿತು ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ಹಿಂದುಳಿದ ಸಮುದಾಯಗಳ ಸಮುದಾಯದ ವಿವಿಧ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು. Read this also : ಮುರಳಿ ನಾಯಕ್ ಬಯೋಪಿಕ್, ಯಂಗ್ ಹೀರೋ ಗೌತಮ್ ಕೃಷ್ಣ ಮುರಳಿ ನಾಯಕ್ ಪಾತ್ರದಲ್ಲಿ, ಬಹುಭಾಷೆಯಲ್ಲಿ ಸಿನಿಮಾ ನಿರ್ಮಾಣ

ಕಾರ್ಯಕ್ರಮದಲ್ಲಿ ತಾಪಂ ಇಒ ನಾಗಮಣಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ವಿ. ನಾರಾಯಣಸ್ವಾಮಿ, ತಾಲೂಕು ಬೈರೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಮಂಜುನಾಥ್ ರೆಡ್ಡಿ, ಕೆಡಿಪಿ ಸದಸ್ಯರಾದ ಎಚ್. ಪಿ. ಲಕ್ಷ್ಮೀನಾರಾಯಣ, ರಿಯಾಜ್ ಪಾಷ ದೇವರಾಜ್ ಅರಸು ರವರ ಸಾಮಾಜಿಕ ಕೊಡುಗೆ ಹಾಗೂ ಜನಪರ ಯೋಜನೆಗಳ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ವಿಕಾಸ್, ಬಿಇಒ ಕೃಷ್ಣ ಕುಮಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ, ಪಪಂ ಉಪಾಧ್ಯಕ್ಷ ಗಂಗರಾಜು, ಪಪಂ ಸದಸ್ಯರು, ಮುಖಂಡ ಅಂಬರೀಷ್, ಆದಿನಾರಾಯಣಪ್ಪ, ಸೇರಿದಂತೆ ತಾಲೂಕಿನ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಹಿಂದುಳಿದ ವರ್ಗಗಳ ಇಲಾಖೆಯ ಸಿಬ್ಬಂದಿ, ಇಲಾಖೆಯ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳು ಹಾಜರಿದ್ದರು.
